Monday, July 7, 2025
Homeಟಾಪ್ ನ್ಯೂಸ್ಮಾಹಿತಿ ಹಕ್ಕು ಕಾಯ್ದೆ ಆಡಳಿತಡಲ್ಲಿ ಪಾರದರ್ಶಕತೆ ತರಲು ಪ್ರಮುಖ ಅಸ್ತ್ರ: ಡಾ: ಬಿ. ಆರ್.ಮಮತಾ

ಮಾಹಿತಿ ಹಕ್ಕು ಕಾಯ್ದೆ ಆಡಳಿತಡಲ್ಲಿ ಪಾರದರ್ಶಕತೆ ತರಲು ಪ್ರಮುಖ ಅಸ್ತ್ರ: ಡಾ: ಬಿ. ಆರ್.ಮಮತಾ

ಬೆಂಗಳೂರು :ಮಾಹಿತಿ ಹಕ್ಕು ಕಾಯ್ದೆಯು ಆಡಳಿತಡಲ್ಲಿ ಪಾರದರ್ಶಕತೆ ತರಲು ಪ್ರಮುಖ ಅಸ್ತ್ರವಾಗಿದೆ ಎಂದು ಮಾಹಿತಿ ಆಯೋಗದ ಆಯುಕ್ತರಾದ ಡಾ: ಬಿ. ಆರ್.ಮಮತಾ ತಿಳಿಸಿದರು.

ಕರ್ನಾಟಕ ಮಾಹಿತಿ ಆಯೋಗದ ಕಾರ್ಯವೈಖರಿಯ ಬಗ್ಗೆ ತಿಳಿಯಲು ಆಯೋಗಕ್ಕೆ ಭೇಟಿ ನೀಡಿದ ಸೇಂಟ್ ಜೋಸೆಫ್ ಕಾನೂನು ಕಾಲೇಜಿನ 65 ವಿದ್ಯಾರ್ಥಿಗಳಿಗೆ ಇಂದು ಆಯೋಗದ ಆಯುಕ್ತರಾದ ಡಾ: ಬಿ.ಆರ್.ಮಮತಾ ಮಾಹಿತಿ ಒದಗಿಸಿದರು.

ಕಾಯ್ದೆಯ ಅಡಿಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸಾರ್ವಜನಿಕ ಪ್ರಾಧಿಕಾರದ ಮೇಲೆ ಒತ್ತಡ ತಂದು ಸರ್ಕಾರದ ಕಾರ್ಯವೈಖರಿ, ಸಾರ್ವಜನಿಕ ಹಣದ ದುರುಪಯೋಗ, ಯೋಜನೆಗಳ ಅನುಷ್ಠಾನದಲ್ಲಿ ಲೋಪದೋಷದಂತಹ ಸಂಗತಿಗಳ ಬಗ್ಗೆ ಮಾಹಿತಿ ಪಡೆದು ಸರ್ಕಾರದ ಮತ್ತು ಸಾರ್ವಜನಿಕರ ಗಮನ ಸೆಳೆಯಬಹುದಾಗಿದೆ. ಮಾಹಿತಿ ಹಕ್ಕು ಕಾಯ್ದೆಯ ಕಾರಣದಿಂದಾಗಿ ಭ್ರಷ್ಟಾಚಾರದ ಅನೇಕ ಪ್ರಕರಣಗಳು ಹೊರಬಂದಿವೆ. ರಾಜ್ಯ ಮಾಹಿತಿ ಆಯೋಗಗಳು ಸಹ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಶೇಷವಾಗಿ ಮಾಹಿತಿ ಹಕ್ಕು ಕಾಯ್ದೆಯ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ಆಯೋಗ ಸಾರ್ವಜನಿಕರಿಗೆ ನ್ಯಾಯ ಒದಗಿಸಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ. ಸಾರ್ವಜನಿಕರಿಂದ ಸ್ವೀಕಾರವಾಗುವ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತವಾಗಿ ವಿಲೇವಾರಿ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಮಾಹಿತಿ ಪಡೆಯುವ ಮೂಲಕ ಸೇವಾ ಗುಣಮಟ್ಟದ ಹೆಚ್ಚಳ, ಅಧಿಕಾರಿಗಳಲ್ಲಿ ಉತ್ತರದಾಯಿತ್ವವನ್ನು ಉಂಟುಮಾಡಲು ಮಾಹಿತಿ ಹಕ್ಕು ಕಾಯ್ದೆ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದರು.

ಇದೇ ಸಂದರ್ಭದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಕಲಾಪಗಳನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಮುಖ್ಯ ಮಾಹಿತಿ ಆಯುಕ್ತರಾದ ಅಶಿತ್ ಮೋಹನ್ ಪ್ರಸಾದ್ ಅವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಕುರಿತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿ ಅವರ ಸಂದೇಹಗಳನ್ನು ಪರಿಹರಿಸಲಾಯಿತು.

ಹೆಚ್ಚಿನ ಸುದ್ದಿ