Thursday, July 2, 2026
Homeಜಿಲ್ಲಾ ಸುದ್ದಿಗಳುರಾಜ್ಯದ ಮಠಮಾನ್ಯಗಳ ಸಾಮಾಜಿಕ ಜವಾಬ್ದಾರಿ ಹಿರಿದು: ಈಶ್ವರ ಖಂಡ್ರೆ

ರಾಜ್ಯದ ಮಠಮಾನ್ಯಗಳ ಸಾಮಾಜಿಕ ಜವಾಬ್ದಾರಿ ಹಿರಿದು: ಈಶ್ವರ ಖಂಡ್ರೆ

ರಾಜ್ಯದ ಮಠಮಾನ್ಯಗಳ ಸಾಮಾಜಿಕ ಜವಾಬ್ದಾರಿ ಹಿರಿದು: ಈಶ್ವರ ಖಂಡ್ರೆ

ಹೊನ್ನಾಳಿ, ಜು 1: ಕರುನಾಡಿನ ಇತಿಹಾಸದಲ್ಲಿ ವೀರಶೈವ ಲಿಂಗಾಯತ ಮಠಮಾನ್ಯಗಳು ಮೆರೆದಿರುವ ಸಾಮಾಜಿಕ ಜವಾಬ್ದಾರಿ ಮಹತ್ವವಾದ್ದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಹೊನ್ನಾಳಿಯಲ್ಲಿಂದು, ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ 91ನೇ ವರ್ಷದ ಜಯಂತ್ಯುತ್ಸವ, ಹೈಟೆಕ್ ಆಸ್ಪತ್ರೆ, ಫಾರ್ಮಸಿ ಕಾಲೇಜು, ಸೈನಿಕ ಶಾಲೆ, ಗೋ ಸಂವರ್ಧನ ಕೇಂದ್ರ ಹಾಗೂ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವೀರಶೈವ ದರ್ಶನ ಶಾಸ್ತ್ರ ಅಧ್ಯಯನ ವಿಭಾಗದ ಫಲಕ ಅನಾವರಣ ಮಾಡಿ ಅವರು ಮಾತನಾಡುತ್ತಿದ್ದರು.
ರಾಜ್ಯದ ವಿವಿಧ ಮಠಗಳು ಎಲ್ಲ ಜಾತಿ, ಜನಾಂಗ, ಧರ್ಮದವರಿಗೂ ಆಶ್ರಯ, ಅನ್ನ ಮತ್ತು ಅಕ್ಷರ ದಾಸೋಹದ ಮೂಲಕ ಜ್ಞಾನದ ದೀವಿಗೆ ಬೆಳಗಿದ್ದಾರೆ. ಈ ಮೂಲಕ ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಇಂದು ಇಲ್ಲಿ ಹೈಟೆಕ್ ಆಸ್ಪತ್ರೆಯ ಕಟ್ಟಡದ ಶಂಕುಸ್ಥಾಪನೆ ನೆರವೇರಿದೆ. ಆಸ್ಪತ್ರೆಗೆ ವೈದ್ಯರ ಸೇವೆ ಅತ್ಯಗತ್ಯ. ಕಾಯಿಲೆಯಿಂದ ನರಳುತ್ತಿರುವವರಿಗೆ ಚಿಕಿತ್ಸೆ ನೀಡಿ, ಗುಣಪಡಿಸಿ ಮರಳಿ ಜೀವ ನೀಡುವ ವೈದ್ಯರನ್ನು ಭಗವಂತ ವೈದ್ಯೋ ನಾರಾಯಣೋ ಹರಿಃ ಎಂದು ಹೇಳುತ್ತಾರೆ.
ಆರೋಗ್ಯವೇ ಭಾಗ್ಯ. ಆರೋಗ್ಯ ನಾಶವಾದರೆ ಬದುಕೇ ದುಸ್ತರವಾಗುತ್ತದೆ. ಹೀಗಾಗಿ ಎಲ್ಲರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಲು ಯೋಗ, ನಡಿಗೆಯೇ ಮೊದಲಾದ ಆರೋಗ್ಯಪೂರ್ಣ ಜೀವನ ಕ್ರಮ ರೂಢಿಸಿಕೊಳ್ಳಬೇಕು ಎಂದರು.
ಪವಾಡಪುರುಷರಾಗಿದ್ದ ಹಿರೇಕಲ್ಮಠದ ಸ್ವಾಮೀಜಿ ಒಡೆಯರ್ ಚಂದ್ರಶೇಖರ ಶಿವಾಚಾರ್ಯರು ತಮ್ಮ ಜೀವಿತಾವಧಿಯಲ್ಲಿ ಈ ಭಾಗದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಜಾಗೃತಿ ಮೂಡಿಸಿದ್ದಾರೆ. ಅದನ್ನು ಈಗಿನ ಸ್ವಾಮೀಜಿಯವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದರು.
ತಾವು ಬಸವಾದಿ ಶರಣರ ಕರ್ಮಭೂಮಿ ಬಸವಕಲ್ಯಾಣವಿರುವ ಬೀದರ್ ಜಿಲ್ಲೆಯಿಂದ ಬಂದಿದ್ದೇನೆ. ತಮ್ಮ ತಂದೆ ಲಿಂಗೈಕ್ಯ ಡಾ. ಭೀಮಣ್ಣ ಖಂಡ್ರೆ ಅವರು ತಮ್ಮ ದೀಕ್ಷಾ ಗುರುಗಳಾದ ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಆಶಯದಂತೆ ಈಗಿರುವ ಆಧುನಿಕ ಅನುಭವ ಮಂಟಪ ನಿರ್ಮಾಣಕ್ಕೆ ಸಹಕರಿಸಿದ್ದರು. ಈಗ ಅದೇ ಬಸವಕಲ್ಯಾಣದಲ್ಲಿ ವಿನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿದೆ. ಇಲ್ಲಿ ಇಷ್ಟಲಿಂಗ ಪೂಜೆಯನ್ನು ವೈಜ್ಞಾನಿಕವಾಗಿ ನಡೆಸುವ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಸಹಿತ ನೀಡಲಾಗುತ್ತಿದೆ ಎಂದರು.
ವೀರಶೈವ ಲಿಂಗಾಯತರಲ್ಲಿ ಪ್ರತಿಭಾವಂತರಿದ್ದಾರೆ. ದೇಶ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಆ ಪ್ರತಿಭೆಯ ಸದ್ಬಳಕೆಯನ್ನು ಸಮುದಾಯ ಮಾಡಿಕೊಳ್ಳಬೇಕಿದೆ. ಇಂದು ಯುವಜನರು ದುಶ್ಚಟಗಳ ದಾಸರಾಗುತ್ತಿದ್ದಾರೆ. ಗುರು ಹಿರಿಯರಿಗೆ ಗೌರವ ನೀಡದಂತಾಗಿದ್ದಾರೆ. ಯುವಶಕ್ತಿ ಅಣುಶಕ್ತಿಗಿಂತ ಮಿಗಲಾಗಿದ್ದು, ಯುವಜನರ ದಾರಿ ತಪ್ಪದಂತೆ ಎಚ್ಚರ ವಹಿಸಬೇಕು ಎಂದರು.
ಇಂದು ಶೇ.30ರಷ್ಟು ಯುವಜನರು ಮದ್ಯ, ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿದ್ದರೆ, ಇನ್ನು ಕೆಲವರು ಕೈಯಲ್ಲಿರುವ ಸ್ಮಾರ್ಟ್ ಫೋನ್ ನ ದಾಸರಾಗಿ, ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ಜಾಗೃತಿ ಮೂಡಿಸುವ ಜವಾಬ್ದಾರಿ ಎಲ್ಲ ಮಠ ಮಾನ್ಯಗಳ ಗುರುಗಳ ಮತ್ತು ಪಾಲಕರ ಮೇಲಿದೆ ಎಂದರು.
ಸಮಾರಂಭದಲ್ಲಿ ಬಾಳೆಹೊನ್ನೂರು ರಂಭಾಪುರಿ ಶ್ರೀಪೀಠದ ಶ್ರೀ 1008 ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಉಜ್ಜಯಿನಿ ಪೀಠದ ಶ್ರೀ 1008 ಜಗದ್ಗುರು ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀಮತ್ ಕಾಶೀ ಜ್ಞಾನ ಸಿಂಹಸನಾಧೀಶ್ವರ ಶ್ರೀ 1008 ಜಗದ್ದುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಕಾಶಿ ಪೀಠದ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶಾಸಕರುಗಳಾದ ಶಾಂತನಗೌಡ, ಸಮರ್ಥ ಶಾಮನೂರು, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತಿತರರು ಪಾಲ್ಗೊಂಡಿದ್ದರು.
((()))
ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮಾಧ್ಯಮಗಳ ಪಾತ್ರ ಹಿರಿದು:ಈಶ್ವರ ಖಂಡ್ರೆ
ಹೊನ್ನಾಳಿ, ಜು.1: ಸಮಾಜದ ತಪ್ಪು ತಿದ್ದುವ, ಜನಾಭಿಪ್ರಾಯ ಮೂಡಿಸುವ ಮಾಧ್ಯಮಗಳು ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ 91ನೇ ವರ್ಷದ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಇಂದು ಪತ್ರಿಕಾ ದಿವಾಗಿದ್ದು, ಈ ಸಮಾರಂಭದಲ್ಲಿ ಪತ್ರಕರ್ತರನ್ನು ಪುರಸ್ಕರಿಸಲಾಗುತ್ತಿದೆ. ಇಂದು ಪ್ರಶಸ್ತಿ ಪಡೆಯುತ್ತಿರುವ ಎಲ್ಲ ಪತ್ರಕರ್ತರಿಗೂ ಅಭಿನಂದನೆಗಳು ಹಾಗೂ ಎಲ್ಲ ಮಾಧ್ಯಮ ಮಿತ್ರರಿಗೂ ಪತ್ರಿಕಾ ದಿನದ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದರು.
ಹಿಂದೆ ಅರಣ್ಯ ಸಚಿವನಾಗಿದ್ದಾಗ ಪ್ರಕೃತಿ ಪರಿಸರ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾಗಿ ಹೇಳಿದ ಅವರು, ಪ್ರಸ್ತುತ ಗ್ರಾಮೀಣಾಭಿವೃದ್ಧಿ ಸಚಿವನಾಗಿ ಜನರ ನಿರೀಕ್ಷೆಯಂತೆ ಕೆಲಸ ಮಾಡುವುದಾಗಿ ತಿಳಿಸಿದರು.
(((()))
ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ ಹಣದ ಕೊರತೆ ಇಲ್ಲ: ಈಶ್ವರ ಖಂಡ್ರೆ
ವಿಬಿಜಿ ರಾಮ್ ಜಿಯಿಂದ ರಾಜ್ಯಗಳ ಮೇಲೆ ಆರ್ಥಿಕ ಹೊರೆ: ಈಶ್ವರ ಖಂಡ್ರೆ
ಹೊನ್ನಾಳಿ, ಜು.1: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಕೊರತೆಯಿಂದ ಕುಡಿಯುವ ನೀರಿನ ಪೂರೈಕೆಯ ಮೇಲೆ ಒತ್ತಡವಿದ್ದರೂ, ನೀರು ಪೂರೈಕೆಗೆ ಹಣಕಾಸಿನ ಕೊರತೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ 91ನೇ ವರ್ಷದ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಎಲ್ ನಿ ನೋ ಪ್ರಭಾವದಿಂದ ರಾಜ್ಯದಲ್ಲಿ ಶೇ.42ರಷ್ಟು ಮಳೆಯ ಕೊರತೆ ಆಗಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಲು ಮತ್ತು ಎಲ್ಲೇ ನೀರಿನ ಸಮಸ್ಯೆ ಇದ್ದರೆ 24 ಗಂಟೆಯಲ್ಲಿ ಪರಿಹರಿಸುವಂತೆ ರಾಜ್ಯದ ಎಲ್ಲ ಜಿಲ್ಲಾ ಪಂಚಾಯ್ತಿಗಳ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿರುವುದಾಗಿ ತಿಳಿಸಿದರು.
ಮನ್ರೇಗಾದ ಪರಿವರ್ತಿತ ರೂಪ ವಿಬಿಜಿ ರಾಮ್ ಜಿಯಲ್ಲಿ ಕೇಂದ್ರ ಸರ್ಕಾರದ ಪಾಲನ್ನು ಈ ಹಿಂದೆ ಇದ್ದ 90:10ರ ಬದಲಿಗೆ 60:40ಕ್ಕೆ ಪರಿವರ್ತಿಸಿರುವುದರಿಂದ ರಾಜ್ಯಗಳ ಮೇಲೆ ದೊಡ್ಡ ಆರ್ಥಿಕ ಹೊರೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಹೆಚ್ಚಿನ ಸುದ್ದಿ