Sunday, July 5, 2026
Homeರಾಜ್ಯಶಿವರಾಮೇಗೌಡರ 'ಶಿವಪಥ: ಮುಳ್ಳಿನ ನಡಿಗೆಯದ್ದು..: ಸಿಎಂ ಡಿ ಕೆ ಶಿವಕುಮಾರ್

ಶಿವರಾಮೇಗೌಡರ ‘ಶಿವಪಥ: ಮುಳ್ಳಿನ ನಡಿಗೆಯದ್ದು..: ಸಿಎಂ ಡಿ ಕೆ ಶಿವಕುಮಾರ್

ಶಿವರಾಮೇಗೌಡರ ‘ಶಿವಪಥ: ಮುಳ್ಳಿನ ನಡಿಗೆಯದ್ದು..: ಸಿಎಂ ಡಿ ಕೆ ಶಿವಕುಮಾರ್

ಬಲಿಷ್ಠರಿಗೇ ಶತ್ರುಗಳು ಹೆಚ್ಚು

ಅಸೂಯೆಗೆ ಮದ್ದಿಲ್ಲ

ಶಿವರಾಮೇಗೌಡರು ಸಮಾಜದ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ

ಬೆಂಗಳೂರು, ಜು.04:

“ಎಲ್ ಆರ್ ಶಿವರಾಮೇಗೌಡರ ಶಿವಪಥ ಮುಳ್ಳಿನ ನಡಿಗೆಯಿಂದ ಕೂಡಿದೆ. ಆ ನಡಿಗೆಯಲ್ಲಿ ಸಾಕಷ್ಟು ಶ್ರಮ ಇದೆ. ಗೌಡರು ವರ್ಣರಂಜಿತ ರಾಜಕಾರಣಿ. ಅವರಂತೆ ವರ್ಣರಂಜಿತರಾಗಲು ನಮ್ಮಿಂದ ಸಾಧ್ಯವಿಲ್ಲ. 70 ವರ್ಷ ಆದರೂ 50 ವರ್ಷದವರಂತೆ ಇದ್ದಾರೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಬಣ್ಣಿಸಿದರು.

ಅರಮನೆ ಮೈದಾನದಲ್ಲಿ ಶನಿವಾರ ನಡೆದ ಮಾಜಿ ಸಂಸದರಾದ ಎಲ್. ಆರ್ ಶಿವರಾಮೇಗೌಡ ಅವರ ಅಭಿನಂದನಾ ಗ್ರಂಥ “ಶಿವಪಥ” ಬಿಡುಗಡೆಗೊಳಿಸಿ ನಂತರ ಮಾತನಾಡಿದರು.

“ಅವರಿಗೆ ಕೆಲ ವರ್ಷಗಳ ಹಿಂದೆ ಲೋಕಸಭೆ ಟಿಕೆಟ್ ಸಿಗಬೇಕಿತ್ತು, ಆದರೆ ಸಿಗಲಿಲ್ಲ. ಅವರು ಕಾಂಗ್ರೆಸ್, ದಳ, ಬಿಜೆಪಿ, ಪಕ್ಷೇತರ ಸೇರಿದಂತೆ ಎಲ್ಲಾ ಚಿಹ್ನೆಗಳಲ್ಲೂ ಸ್ಪರ್ಧೆ ಮಾಡಿದ್ದಾರೆ. ಸಮಯ ಕೆಟ್ಟದಾಗಿ ಇದ್ದಾಗ ನಮ್ಮನ್ನು ಸಿಲುಕಿಸಲು ಪ್ರಯತ್ನಿಸುತ್ತಾರೆ. ನನ್ನನ್ನು ಸಿಲುಕಿಸಲು ಪ್ರಯತ್ನ ಮಾಡಿದರು. ಆದರೆ ನಾನು ಸಿಲುಕಲಿಲ್ಲ. ನಮ್ಮ ಗುರಿ ಒಂದೇ ಇತ್ತು. ನಿಮ್ಮ ಆಶೀರ್ವಾದದಿಂದ ನಾನು ಈ ಹಂತಕ್ಕೆ ತಲುಪಿದ್ದೇನೆ” ಎಂದು ಹೇಳಿದರು.

“1983ರಿಂದ ನನಗೂ ಶಿವರಾಮೇಗೌಡರಿಗೂ ಸ್ನೇಹವಿದೆ. ಅವರು ವಿದ್ಯಾರ್ಥಿ ನಾಯಕರು ಹಾಗೂ ಉದ್ಯಮಿಗಳು ಆಗಿದ್ದರು. ಇಂದಿರಾಗಾಂಧಿ ಅವರು ವಿಧಿವಶರಾಗಿದ್ದ ಸಂದರ್ಭದಲ್ಲಿ ಎಸ್. ಎಂ ಕೃಷ್ಣ ಅವರು ಹಾಗೂ ನಾಗೇಗೌಡರು ಬಹಳ ರಿಸ್ಕ್ ತೆಗೆದುಕೊಂಡು ನಾಗಮಂಗಲದಲ್ಲಿ ಇವರಿಗೆ ಟಿಕೆಟ್ ನೀಡಿದರು. ಚುನಾವಣೆಯಲ್ಲಿ ಗೆಲ್ಲಲು ಆಗಲಿಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ಬಂದಾಗಲೂ ಕೃಷ್ಣ ಅವರು ಸೋತಿದ್ದರು. ಅದೊಂದು ಇತಿಹಾಸ” ಎಂದು ಹೇಳಿದರು.

ಬಲಿಷ್ಠರಾದಷ್ಟು ಶತ್ರುಗಳು ಹೆಚ್ಚು

“ಇಬ್ಬರೂ ಜಿಲ್ಲಾ ಪಂಚಾಯಿತಿ ಸದಸ್ಯರಾದೆವು, ಶಾಸಕರಾದೆವು. ಬಾಲಗಂಗಾಧರ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಪಕ್ಷೇತರರಾಗಿ ನಾಗಮಂಗಲದಲ್ಲಿ ಗೆದ್ದರು. ಯುವಕರಾಗಿ ಯಾರು ಮುಂದಕ್ಕೆ ಸಾಗುತ್ತಾರೋ ಅವರಿಗೆ ವೈರಿಗಳು ಸಹಜ. ನಾವು ಬಲಿಷ್ಠರಾದಷ್ಟು ಶತ್ರುಗಳು ಹೆಚ್ಚು, ನಾವು ಕಡಿಮೆ ಬಲಿಷ್ಠರಾದರೆ ಕಡಿಮೆ ಶತ್ರು. ನಾವು ಬಲಿಷ್ಠರೇ ಆಗದಿದ್ದರೆ ಶತ್ರುಗಳು ಇರುವುದಿಲ್ಲ. ರಾಜಕಾರಣ ಸುಲಭದ ಕೆಲಸವಲ್ಲ. ರಾಜಕೀಯದಲ್ಲಿ ಯಶಸ್ಸಿನ ಕಥೆಗಳು ಅಷ್ಟಾಗಿ ಸಿಗುವುದಿಲ್ಲ. ಶ್ರಮ ಹಾಗೂ ಜನರ ವಿಶ್ವಾಸ ಮುಖ್ಯ. ಮತದಾರ ದೇವರು ನಮ್ಮ ಪರವಾಗಿರುವಷ್ಟು ದಿನ ನಾವು ರಾಜಕಾರಣದಲ್ಲಿ ಇರುತ್ತೇವೆ” ಎಂದು ಹೇಳಿದರು.

ಅಸೂಯೆಗೆ ಮದ್ದಿಲ್ಲ

“ರಾಜಕಾರಣದಲ್ಲಿ ಗೆಲುವು ಸೋಲು ಇದ್ದೇ ಇರುತ್ತದೆ. ನಾವು ಎರಡನ್ನೂ ನೋಡಿದ್ದೇವೆ. ನಾನು, ಶಿವರಾಮೇಗೌಡರು, ಬಂಗಾರಪ್ಪ ಅವರು ಬಹಳ ಆತ್ಮೀಯರಾಗಿದ್ದೆವು. ಆಗ ನನಗೆ ಚುಂಚನಗಿರಿ ಹಾಸ್ಟೆಲ್ ಉದ್ಘಾಟನೆಗೆ ಸ್ವಾಮೀಜಿಗಳು ಕರೆದಿದ್ದರು. ಅಲ್ಲೇ ನನ್ನ ಮದುವೆಗೆ ಹೆಣ್ಣು ತೋರಿಸಲು ವ್ಯವಸ್ಥೆ ಮಾಡಿದ್ದರು. ನಾನು ಶಿವರಾಮೇಗೌಡರು, ಚಿಕ್ಕೇಗೌಡರು ಹೋಗುತ್ತಿದ್ದೆವು. ಅಂದೇ ಇವರು ಪಕ್ಷೇತರರಾಗಿ ಗೆದ್ದಿದ್ದರು ಎಂದು ನ್ಯಾಯಾಲಯದಲ್ಲಿ ಆಕ್ಷೇಪಣೆ ಹಾಕಿ, ಅವರ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು. ಅಸೂಯೆಗೆ ಮದ್ದಿಲ್ಲ. ನಾನು ಆ ಸಂದರ್ಭದಲ್ಲಿ ಅವರ ಜೊತೆಯಲ್ಲಿದ್ದೆ. ನಾವು ಧೈರ್ಯ ತುಂಬಿದೆವು. ಕೆಲವೇ ದಿನಗಳಲ್ಲಿ ವಕೀಲರ ಸಾವಿನ ಆಪಾದನೆ ಇವರ ಮೇಲೆ ಹಾಕಿದರು”ಎಂದರು.

“ಕಲ್ಲು ಪ್ರಕೃತಿ ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಕಲ್ಲು ಶಿಲೆಯಾಗಬೇಕಾದರೆ ಉಳಿ ಪೆಟ್ಟು ಬೀಳಬೇಕು. ಶಿವರಾಮೇಗೌಡರು ಇಷ್ಟು ದೂರ ಶಿವಪಥದಲ್ಲಿ ಸಾಗಬೇಕಾದರೆ ಸಾಕಷ್ಟು ಪೆಟ್ಟು ತಿಂದು, ಅನುಭವಿಸಿದ್ದಾರೆ. ಅವರಿಗೆ ಇನ್ನಷ್ಟು ಆರೋಗ್ಯ ಸಿಗಲಿ ಇನ್ನಷ್ಟು ಕಾಲ ಜನರ ಸೇವೆ ಮಾಡಲಿ ಎಂದು ಹಾರೈಸಲು ನಾವು ಇಲ್ಲಿಗೆ ಬಂದಿದ್ದೇವೆ. ಅವರ ಎಲ್ಲಾ ಕಷ್ಟ ಕಾಲದಲ್ಲಿ ಅವರ ಧರ್ಮಪತ್ನಿ ಬೆನ್ನೆಲುಬಾಗಿ ನಿಂತಿದ್ದಾರೆ” ಎಂದು ಹೇಳಿದರು.

“ಎಸ್ ಎಂ ಕೃಷ್ಣ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅವರನ್ನು ಸಿಎಂ ಮಾಡಬೇಕು ಎಂಬ ಆಸೆ ನಮಗಿತ್ತು. ಆ ಸಮಯದಲ್ಲಿ ಅಂಬರೀಷ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ತರಬೇಕಾದರೆ ಶಿವರಾಮೇಗೌಡರ ಪಾತ್ರ ದೊಡ್ಡದಿತ್ತು. ಆಗ ಏನಾಯ್ತು ಎಂದು ಬಹಿರಂಗ ಮಾಡಲು ಆಗುವುದಿಲ್ಲ. ಆ ಸಂದರ್ಭದಲ್ಲಿ ನಾವು ಚುನಾವಣೆ ನಂತರ ಮಂತ್ರಿ ಮಾಡುವ ಆಲೋಚನೆ ಇತ್ತು. ನಾವು ದುಬೈ ಪ್ರವಾಸಕ್ಕೆ ಹೋದೆವು. ಆಗ ಸೂಟು ಹೊಲಿಸಿಕೊಂಡಿದ್ದರು. ಆದರೆ ಆ ಚುನಾವಣೆಯಲ್ಲಿ ಅವರು ಸೋತರು, ನಾನು ಗೆದ್ದೆ, ನಾನು ಸಚಿವನಾದೆ. ಹೀಗೆ ಅವರು ಅನೇಕ ನೋವು ಅನುಭವಿಸಿದ್ದಾರೆ. ನಂತರ ನಾನು ಅವರಿಗೆ ಸಾಕಷ್ಟು ಸಲಹೆ ನೀಡಿದೆ” ಎಂದು ಹೇಳಿದರು.

ಶಿವರಾಮೇಗೌಡರು ಸಮಾಜದ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ

“ನಾನು ಶಿಕ್ಷಣ ಸಂಸ್ಥೆ ಆರಂಭಿಸಿದ್ದೆ, ನೀವು ಸಮಾಜಕ್ಕಾಗಿ ಶಿಕ್ಷಣ ಸಂಸ್ಥೆ ಆರಂಭಿಸಿ ಎಂದು ಹೇಳಿದೆ. ಅವರು ನಂತರ ಶಿಕ್ಷಣ ಸಂಸ್ಥೆ ಆರಂಭಿಸಿದರು. ಅವರ ಕುಟುಂಬದವರು ಸೇರಿ ಒಟ್ಟು ಐದಾರು ಶಾಲೆ ನಡೆಸುತ್ತಿದ್ದಾರೆ. ಪರೋಪಕಾರಾಯ ಫಲಂತಿ ವೃಕ್ಷಾಃ, ಪರೋಪಕಾರಾಯ ವಹಂತಿ ನದ್ಯಃ, ಪರೋಪಕಾರಾಯ ದುಹಂತಿ ಗಾವಃ, ಪರೋಪಕಾರಾರ್ಥಮಿ ದಂ ಶರೀರಮ್ ಎಂಬ ಶ್ಲೋಕದಂತೆ ಶಿವರಾಮೇಗೌಡರು ಸಮಾಜದ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ” ಎಂದರು.

“ನನ್ನನ್ನು ಬಂಧಿಸಿದಾಗ ಇಲ್ಲಿರುವವರೆಲ್ಲ ನನ್ನ ಪರವಾಗಿ ನಿಂತಿರಿ. ಆಗ ನನ್ನ ಪರವಾಗಿ ಮಾತನಾಡಲು ಹಿಂಜರೆಯುತ್ತಿದ್ದರು. ಆ ಸಮಯದಲ್ಲಿ ವೇದಿಕೆ ಮೇಲೆ ನನ್ನ ಪರವಾಗಿ ನಿಂತು ಮಾತನಾಡಿದವರು ನಂಜಾವಧೂತ ಸ್ವಾಮೀಜಿಗಳು. ನಾನು ಎಲ್ಲಾ ಬೆಳವಣಿಗೆಯನ್ನು ಪತ್ರಿಕೆಗಳ ಮೂಲಕ ಎಲ್ಲವನ್ನು ಓದುತ್ತಿದ್ದೆ. ಸಿಂಹ ಒಳಗಿದ್ದರೂ ಸಿಂಹವೇ, ಹೊರಗಿದ್ದರೂ ಸಿಂಹವೇ ಎಂದು ಹೇಳಿದ್ದ ಮಾತು ನನಗೆ ಈಗಲೂ ನೆನಪಿದೆ. ನಾನು ಅವರ ಋಣ ತೀರಿಸಬೇಕಿದೆ. ದೇವರು ನನಗೆ ಶಕ್ತಿ ನೀಡಿದ್ದಾನೆ. ಬೇರೆ ಸಂದರ್ಭದಲ್ಲಿ ಈ ವಿಚಾರ ಮಾತನಾಡುತ್ತೇನೆ. ನಮಗೆ ಉಪಕಾರ ಸ್ಮರಣೆ ಇರಬೇಕು. ಅದು ಇಲ್ಲವಾದರೆ ನಾವು ಮನುಷ್ಯರಾಗಿ ಇರುವುದಿಲ್ಲ” ಎಂದರು.

ಹೆಚ್ಚಿನ ಸುದ್ದಿ