ರೈತರ ಪ್ರತಿ ಎಕರೆಗೆ 25000 ರೂ. ಪರಿಹಾರ ನೀಡಬೇಕು
ಕಲಬುರಗಿ : ಅತಿಯಾದ ಮಳೆಯಿಂದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು ಹಾಗಾಗಿ ಕೂಡಲೇ ಸರಕಾರ ರೈತರ ನೇರವಿಗೆ ಬಂದು ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು ಹಾಗೂ ಕಲಬುರಗಿ ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಮಹಾಂತೇಶ್ ಜಮಾದಾರ ಹೇಳಿದರು. ನಗರದಲ್ಲಿ ಸುದ್ಧಿಗಾರರನ್ನುದ್ದೇಶಿಸಿ ಮಾತನಾಡಿದ ಅವರು ರೈತ ಬೆಳದ ಮುಂಗಾರು ಬೆಳೆಗಳಾದ ಉದ್ದು,ಹೆಸರು, ಸೋಯಾಬಿನ್ ಸೇರಿದಂತೆ ಅನೇಕ ಬೆಳೆಗಳು ಸಂಪೂರ್ಣ ವಾಗಿ ಮಳೆಗೆ ನಾಶವಾಗಿವೆ, ಅದರಲ್ಲೂ ಈ ಭಾಗದಲ್ಲಿ ಅತೀ ಹೆಚ್ಚು ಬೆಳೆಯುವ ತೊಗರಿ ಬೆಳೆ ಕೂಡ ಸಂಪೂರ್ಣವಾಗಿ ಮಳೆಯಲ್ಲಿ ನೆನೆದು ಹಾಳಾಗಿದೆ. ಅಷ್ಟೇ ಅಲ್ಲದೆ ರೈತರು ಬೆಳೆ ವಿಮೆ ಮಾಡಿಸಿದ್ದಾರೆ ಆದರೆ ಬೆಳೆ ಹಾನಿಯಾದ ಬಗ್ಗೆ ದೂರು ನೀಡಲು ಇನ್ಸೂರೆನ್ಸ್ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿದರೆ ಅದು ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ ಆದ ಕಾರಣ ಪ್ರತಿ ತಾಲೂಕಿನ ಸರ್ಕಾರಿ ಕಚೇರಿಯಲ್ಲಿ ವಿಮೆ ಅಧಿಕಾರಿಗಳನ್ನು ನಿಮಿಸಬೇಕು, ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಬೆಳೆ ಹಾನಿಯಾದ ರೈತರಿಗೆ ಪ್ರತಿ ಎಕರಿಗೆ 25 ಸಾವಿರ ರೂಪಾಯಿ ಪರಿಹಾರ ನೀಡುವಂತ ಕೆಲಸ ಸರ್ಕಾರ ಮಾಡಬೇಕು ಎಂದರು. ಅಷ್ಟೇ ಅಲ್ಲದೆ ಅಫಜಲಪೂರ ತಾಲೂಕಿನ ಫರತಹಬಾದ ವ್ಯಾಪ್ತಿಯ ಕೌವಲಗಾ (ಬಿ ) ಗ್ರಾಮದಲ್ಲಿ ರೈತ ಹಣಮಂತ ಬಸವರಾಜ ಎನ್ನುವವರು ಅತಿಯಾದ ಸಾಲದ ಹೊರೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಹಾಗಾಗಿ ಮೃತ ರೈತನ ಕುಟುಂಬಕ್ಕೆ ಮಾನ್ಯ ಜಿಲ್ಲಾಧಿಕಾರಿ ಗಳು ಹಾಗೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸರಕಾರದಿಂದ ಸೂಕ್ತ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಹಾಗೂ ಸಂಪೂರ್ಣವಾಗಿ ರೈತನ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.