ಮೂಕಿಹಾಳ: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾರ್ವಜನಿಕರ ಸೇವಕರಾಗಿದ್ದು, ಜನರು ಪಾವತಿಸುವ ತೆರಿಗೆ ಹಣದಿಂದಲೇ ಸಂಬಳ ಪಡೆಯುತ್ತಾರೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಇರಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.
ತಾಲೂಕಿನ ಮೂಕಿಹಾಳ ಗ್ರಾಮ ಪಂಚಾಯಿತಿ ಎದುರು ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.
ಈ ಹಿಂದೆ ರೈತರ ಹೆಸರಿನಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ. ಆದರೆ ಇನ್ನು ಮುಂದೆ ರೈತರಿಗೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಯಾವುದೇ ವಿಳಂಬವಿಲ್ಲದೆ ಪಾರದರ್ಶಕವಾಗಿ ತಲುಪಿಸುವ ಜವಾಬ್ದಾರಿಯನ್ನು ಅಧಿಕಾರಿಗಳು ನಿರ್ವಹಿಸಬೇಕು ಎಂದು ಆಗ್ರಹಿಸಿದರು.

ಬೆಳೆ ಹಾನಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳ ಸೂಚನಾ ಫಲಕಗಳಲ್ಲಿ ಮುಂಚಿತವಾಗಿ ಮಾಹಿತಿ ಪ್ರಕಟಿಸಬೇಕು. ಅಲ್ಲದೆ, ಪಂಚಾಯಿತಿಗೆ ಒಳಪಡುವ ಪ್ರತಿಯೊಂದು ಗ್ರಾಮದಲ್ಲೂ ನಾಮಫಲಕ ಅಥವಾ ಪ್ರಕಟಣೆ ಅಳವಡಿಸಿ, ಸಮೀಕ್ಷೆಯ ಮಾಹಿತಿ ಪ್ರತಿಯೊಬ್ಬ ರೈತನಿಗೂ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಸ್ತೆ, ಮನೆ ಮತ್ತು ಶೌಚಾಲಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಜನರು ಪ್ರಶ್ನಿಸುತ್ತಿದ್ದಾರೆ. ರೈತರಿಗೆ ಮೂಲಭೂತ ಅಗತ್ಯವಾಗಿರುವ ಶುದ್ಧ ಕುಡಿಯುವ ನೀರಿನ ಯೋಜನೆಗಳಲ್ಲಾದರೂ ಯಾವುದೇ ಅಕ್ರಮ ನಡೆಯದಂತೆ ಎಚ್ಚರ ವಹಿಸಿ, ಗ್ರಾಮೀಣ ಜನರಿಗೆ ಗುಣಮಟ್ಟದ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಕೃಷಿ ಅಧಿಕಾರಿಗಳಿಗೆ ತರಾಟೆ; ಬೆಳೆ ಪರಿಹಾರ ಮತ್ತು ಫಸಲ್ ಬಿಮಾ ಯೋಜನೆ ಕುರಿತು ಪಾರದರ್ಶಕ ಮಾಹಿತಿ ನೀಡಲು ಆಗ್ರಹ
ರೈತರಿಗೆ ದೊರೆಯಬೇಕಾದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸೇರಿದಂತೆ ವಿವಿಧ ಬೆಳೆ ಪರಿಹಾರ ಯೋಜನೆಗಳ ಅನುಷ್ಠಾನದಲ್ಲಿ ಕೃಷಿ ಇಲಾಖೆ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಬೆಳೆ ವಿಮಾ ಕಂಪನಿಯ ಸಿಬ್ಬಂದಿಯಿಂದ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.
ರೈತರಿಗೆ ಸಲ್ಲಬೇಕಾದ ಪರಿಹಾರ, ವಿಮೆ ಹಾಗೂ ಇತರೆ ಸೌಲಭ್ಯಗಳ ಕುರಿತು ಸಂಬಂಧಪಟ್ಟ ಇಲಾಖೆಗಳು ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಂಡು ಮಾಹಿತಿ ನೀಡಬೇಕು. ಬೆಳೆ ಹಾನಿ ಸಮೀಕ್ಷೆ, ಫಲಾನುಭವಿಗಳ ಆಯ್ಕೆ, ಪರಿಹಾರದ ಮೊತ್ತ ಹಾಗೂ ವಿತರಣೆ ಪ್ರಕ್ರಿಯೆ ಸೇರಿದಂತೆ ಎಲ್ಲ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಪ್ರತಿಯೊಬ್ಬ ರೈತನಿಗೂ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಯಾವುದೇ ರೈತರಿಗೆ ಅನ್ಯಾಯವಾಗದಂತೆ ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಯೋಜನೆಗಳ ಅನುಷ್ಠಾನದಲ್ಲಿ ಕಂಡುಬಂದಿರುವ ಲೋಪಗಳು ಹಾಗೂ ಆರೋಪಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
