ಕೋಹಳ್ಳಿಯಲ್ಲಿ 150 ಕೋಟಿ ವೆಚ್ಚದ ಬ್ರೀಜ್ ಕಂ ಬಾಂದಾರ ಕಾಮಗಾರಿಗೆ ಚಾಲನೆ: ಸಂಪೂರ್ಣ ಮಳೆಯ ಬಳಿಕವೇ ಬಿತ್ತನೆ ಮಾಡಿ – ಶಾಸಕ ಲಕ್ಷ್ಮಣ ಸವದಿ
ಅಥಣಿ, ಜು. 3: ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ರೈತರು ಆತುರಪಟ್ಟು ಬಿತ್ತನೆ ಮಾಡದೇ, ಸಮರ್ಪಕ ಮಳೆಯಾದ ನಂತರವೇ ಭೂದೇವಿಯ ಉಡಿ ತುಂಬಬೇಕು ಎಂದು ಶಾಸಕ ಲಕ್ಷ್ಮಣ ಸವದಿ ರೈತರಿಗೆ ಸಲಹೆ ನೀಡಿದರು.
ತಾಲೂಕಿನ ಕೋಹಳ್ಳಿ ಗ್ರಾಮದ ಮಲ್ಲೇವ್ವಮಡ್ಡಿ ಸಮೀಪ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ 150 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬ್ರೀಜ್ ಕಂ ಬಾಂದಾರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಅಥಣಿ ತಾಲೂಕಿನಲ್ಲಿ ನೀರಾವರಿ ವಿಸ್ತರಣೆಗೆ ಕರಿಮಸೂತಿ, ಕೊಟ್ಟಲಗಿ ಅಮ್ಮಾಜೇಶ್ವರಿ, ತುಂಗಳ–ಸಾವಳಗಿ ಯೋಜನೆಗಳು ಹಾಗೂ ಕೆರೆ ತುಂಬುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಳೆರಾಯನ ಕೃಪೆಯಿಂದ ಈ ಯೋಜನೆಗಳು ಯಶಸ್ವಿಯಾದರೆ ಬರಡು ಭೂಮಿಯೂ ಹಸಿರಿನಿಂದ ಕಂಗೊಳಿಸಲಿದೆ. ರೈತನ ಮುಖದಲ್ಲಿ ಮಂದಹಾಸ ಮೂಡಬೇಕಾದರೆ ಇನ್ನೂ ಕೆಲ ದಿನ ಮಳೆಯ ನಿರೀಕ್ಷೆಯಲ್ಲಿರಬೇಕು. ಆದ್ದರಿಂದ ರೈತರು ಆತುರದಲ್ಲಿ ಬಿತ್ತನೆ ಮಾಡಿ ಬೀಜ ಹಾಗೂ ಗೊಬ್ಬರಕ್ಕಾಗಿ ಅನಗತ್ಯ ಖರ್ಚು ಮಾಡಬಾರದು ಎಂದು ಸಲಹೆ ನೀಡಿದರು.
ಸುಮಾರು 20 ವರ್ಷಗಳ ಹಿಂದೆ “ನಮ್ಮ ಊರು–ನಮ್ಮ ಬಾಂದಾರ” ಯೋಜನೆಯಡಿ ನಿರ್ಮಿಸಲಾದ ಪಾಂಡೇಗಾಂವ, ಪಾರ್ಥನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಬಾಂದಾರಗಳ ಜೊತೆಗೆ ಕೋಹಳ್ಳಿ ಗ್ರಾಮದ ಬಾಂದಾರದ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಭೂ ನ್ಯಾಯ ಮಂಡಳಿ ಸದಸ್ಯ ಸಂಗಯ್ಯಾ ಪೂಜಾರಿ ಮಾತನಾಡಿ, ಶಾಸಕ ಲಕ್ಷ್ಮಣ ಸವದಿಯವರು ಅಥಣಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ರಾಜ್ಯದ ಜನಪರ ಹಾಗೂ ಕ್ರಿಯಾಶೀಲ ಶಾಸಕರಲ್ಲಿ ಪ್ರಮುಖರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ದೊರೆತರೆ ಕ್ಷೇತ್ರದ ಜೊತೆಗೆ ರಾಜ್ಯದ ಅಭಿವೃದ್ಧಿಗೂ ಅವರ ಅನುಭವ ಹೆಚ್ಚಿನ ಕೊಡುಗೆ ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ ಪಾಟೀಲ, ಸಂಗಯ್ಯಾ ಪೂಜಾರಿ, ಶೇಖರ ನೇಮಗೌಡ, ತುಕಾರಾಮ ದೇವಖಾತೆ, ನೂರಅಹ್ಮದ್ ಡೊಂಗರಗಾಂವ, ಸದಾಶಿವ ಹರಪಾಳೆ, ಉಮ್ಮಯ್ಯಾ ಪೂಜಾರಿ, ದುಂಡಪ್ಪ ಡಂಬಳಿ, ದಿಲೀಪ ಮರಗಾಳೆ, ಮಲಗೌಡ ಪಾಟೀಲ, ಸದಾಶಿವ ಮಾಳಿ, ಶಿವಗೌಡ ಮುಧೋಳ, ಸಹದೇವ ಸೂರ್ಯವಂಶಿ, ಲಿಂಗರಾಜ ಮುಧೋಳ, ಚಿದಾನಂದ ತಳಕೇರಿ, ಸಿಕಂದರ ಮುಜಾವರ, ಗುತ್ತಿಗೆದಾರ ಬಿ.ವೈ. ಪಾತ್ರೂಟ, ಸದಾಶಿವ ಸವದಿ, ಮಹೇಶ ಬಡಕೆ, ಲಕ್ಷ್ಮಣ ಉಮರಾಣಿ, ತುಕಾರಾಮ ಫಡತಾರೆ, ದೊಂಡಿಭಾ ನಾಗಣಿ, ಜಟ್ಟೇಪ್ಪ ಮಿರ್ಜಿ, ಗಣಪತಿ ಮರಗಾಳೆ, ಮಲ್ಲಪ್ಪ ಬಡಚಿ, ಗುರು ಮಂಟೂರ, ಪರಶುರಾಮ ಮಾದರ, ಪುರಂದರ ನಾಟೀಕಾರ, ಬಸಪ್ಪ ನಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
