ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಹಿರಿಯ ಹಾಗೂ ಸರಳ-ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಶಾಸಕ ಸಿ. ಎಸ್. ನಾಡಗೌಡ (ಅಪ್ಪಾಜಿ) ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಿದರೆ ವಿಜಯಪುರ ಜಿಲ್ಲೆ ಮಾತ್ರವಲ್ಲ, ಇಡೀ ಕರ್ನಾಟಕದ ಅಭಿವೃದ್ಧಿಗೆ ಅವರ ಅನುಭವ ಮತ್ತು ಸೇವೆ ಮತ್ತಷ್ಟು ಪರಿಣಾಮಕಾರಿಯಾಗಲಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ರಂಭಾಪುರಿ ಮಠದ ಜಗದ್ಗುರು ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ವಿಜಯಪುರ ಜಿಲ್ಲೆಯ ದೇವರಹಿಪ್ಪರ ಕ್ಷೇತ್ರದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರಣ ತತ್ವಗಳನ್ನು ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಂಡಿರುವ ಅಪ್ಪಾಜಿ ಅವರು ಶುದ್ಧ ಹಸ್ತದ, ಜನಪರ ರಾಜಕಾರಣಿಯಾಗಿ ಹೆಸರುವಾಸಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಸಿ. ಎಸ್. ನಾಡಗೌಡರು ಪ್ರತಿಷ್ಠಿತ ಬಲದಿನ್ನಿ ರಾಜಮನೆತನದ ಕುಟುಂಬದವರಾಗಿದ್ದು, ಸಾರ್ವಜನಿಕ ಜೀವನದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಇಂತಹ ಹಿರಿಯ ಹಾಗೂ ಅನುಭವಿ ನಾಯಕರಿಗೆ ಸಚಿವ ಸ್ಥಾನ ನೀಡಿದರೆ ಸಕಲ ಜನಾಂಗಕ್ಕೂ ನ್ಯಾಯ ದೊರೆಯುವ ರೀತಿಯ ಆಡಳಿತ ನೀಡಲು ಸಾಧ್ಯವಾಗುತ್ತದೆ” ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಾಯ:
ಅಪ್ಪಾಜಿ ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಅವರು ಕೈಗೊಳ್ಳುವ ಜನಸ್ನೇಹಿ ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಿಷ್ಠವಾಗಲು ನೆರವಾಗುತ್ತದೆ. ಆದ್ದರಿಂದ ಅವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ಗೆ ನಾನು ಒತ್ತಾಯಿಸುತ್ತೇನೆ ಎಂದು ಜಗದ್ಗುರು ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
