ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಇನ್ನೂ ಅಂತಿಮಗೊಳ್ಳದಿರುವುದು ಕಾರ್ಯಕರ್ತರ ಗೊಂದಲಕ್ಕೆ ಕಾರಣವಾಗಿದೆ. ಹೆಚ್ ಡಿ ರೇವಣ್ಣ ಕುಟುಂಬವು ಹೇಗಾದರೂ ಭವಾನಿ ರೇವಣ್ಣರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದರೆ, ಹೆಚ್ ಡಿ ಕುಮಾರಸ್ವಾಮಿ ಹಾಸನದಿಂದ ಭವಾನಿ ರೇವಣ್ಣರಿಗೆ ಟಿಕೆಟ್ ನೀಡಬಾರದೆಂದು ಪಟ್ಟು ಹಿಡಿದಿದ್ದಾರೆ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಗೆಲ್ಲಿಸುವುದಾಗಿ ಹೆಚ್ಡಿಕೆ ಶಪಥ ಹಾಕಿದ್ದಾರೆ.
ಈ ನಡುವೆ ಹೆಚ್ ಡಿ ದೇವೇಗೌಡರನ್ನು ಭೇಟಿ ಆಗಿರುವ ಸಂಸದ ಪ್ರಜ್ವಲ್ ರೇವಣ್ಣ ಅಮ್ಮನಿಗೆ ಟಿಕೆಟ್ ನೀಡದಿದ್ರೆ ತಾನು ರಾಜಿನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.
ಇದು ಹೆಚ್ಡಿಕೆ ಕೋಪಕ್ಕೆ ಕಾರಣವಾಗಿದೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್ ರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು, ಬ್ಲ್ಯಾಕ್ಮೇಲ್ ತಂತ್ರಗಾರಿಕೆ ನನ್ನ ಬಳಿ ಬೇಡ ಎಂದು ಪ್ರಜ್ವಲ್ಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ನನ್ನಲ್ಲಿ ಯಾವುದೇ ಬ್ಲ್ಯಾಕ್ಮೇಲ್ ತಂತ್ರ ನಡೆಯುವುದಿಲ್ಲ, ನನ್ನ ನಿರ್ಧಾರ ಅಚಲ, ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವುದು ಖಚಿತ, ನನಗೆ ಪಕ್ಷ ಹಾಗೂ ಪಕ್ಷದ ಕಾರ್ಯಕರ್ತರು ಮುಖ್ಯ, ಸಾರ್ವಜನಿಕ ಟೀಕೆಗೆ ಒಳಗಾಗುವಂತಹ ಅಭ್ಯರ್ಥಿ ಆಯ್ಕೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಯಾವುದೇ ಕಾರಣಕ್ಕೂ ಭವಾನಿ ರೇವಣ್ಣರಿಗೆ ಟಿಕೆಟ್ ಇಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ
ಒಟ್ಟಾರೆ, ಹಾಸನದ ಜೆಡಿಎಸ್ ಟಿಕೆಟ್ ದೇವೇಗೌಡರ ಕುಟುಂಬದೊಳಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಹೆಚ್ಡಿಕೆ ಹಠ ಗೆಲ್ಲುತ್ತದೋ ರೇವಣ್ಣ ಹಠ ಗೆಲ್ಲುತ್ತದೋ ಎನ್ನುವುದು ಕಾದು ನೋಡಬೇಕಿದೆ.
