ಬಿಜೆಪಿ ಹಿರಿಯ ನಾಯಕರಾದ ಕೆಎಸ್ ಈಶ್ವರಪ್ಪ , ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಟಿಕಟ್ ಸಿಗದಿರಲು ನಳಿನ್ ಕುಮಾರ್ ಕಟೀಲ್ ಬಣವೇ ಕಾರಣ ಎಂಬ ಚರ್ಚೆ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ.
ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ಅವರನ್ನು ಬದಿಗೆ ತಳ್ಳಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿರುವ ಹಳೆಯ ಆಡಿಯೋ ರೆಕಾರ್ಡ್ ವೈರಲ್ ಆಗುತ್ತಿದೆ.
2021ರಲ್ಲಿ ಬಿ.ಎಸ್ ಯಡಿಯೂರಪ್ಪರನ್ನು ಸಿಎಂ ಗಾದಿಯಿಂದ ಇಳಿಸುವಾಗಿನ ಆಡಿಯೋ ಇದಾಗಿದ್ದು, ಇದರಲ್ಲಿ, “ಯಾರಿಗೂ ಹೇಳಬೇಡಿ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರ ಟೀಮನ್ನು ಫುಲ್ ತೆಗೆಯೋದು. ಎಲ್ಲ ಹೊಸ ಟೀಮ್ ಮಾಡುತ್ತಿದ್ದೇವೆ” ಎಂದು ನಳಿನ್ ಕುಮಾರ್ ಹೇಳುವುದು ಕೇಳಿ ಬಂದಿತ್ತು.
“ಇನ್ನು ಯಾರೇ ಆದರೂ ನಮ್ಮ ಕೈಯಲ್ಲೇ ಇನ್ನು” ಎಂದು ಹೇಳಿದ್ದರು. ಹೊಸ ಸಿಎಂ ಕುರಿತು ನಳಿನ್ ಈ ರೀತಿ ಹೇಳಿಕೆ ನೀಡಿದ್ದರು. ಸದ್ಯ ಈ ಆಡಿಯೋ ಮತ್ತೆ ಮುನ್ನೆಲೆಗೆ ಬಂದಿದ್ದು, ಈಶ್ವರಪ್ಪ ಹಾಗೂ ಶೆಟ್ಟರ್ ತಲೆದಂಡಕ್ಕೆ ನಳಿನ್ ಕುಮಾರ್ ಕಟೀಲ್ ಕಾರಣವೇ ಎಂಬ ಚರ್ಚೆ ನಡೆಯುತ್ತಿದೆ.
