ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಮಂಗಳವಾರ ರಾತ್ರಿ ಬಿಡುಗಡೆಯಾಗಿದ್ದು, ಹಲವು ಅಚ್ಚರಿಯ ಮುಖಗಳಿಗೆ ಬಿಜೆಪಿ ಮಣೆಹಾಕಿದೆ. ಅವುಗಳ ಪೈಕಿ ಹಲವು ನಗರಪಾಲಿಕೆ ಸದಸ್ಯರಿಗೂ ಎಂಎಲ್‌ಎ ಟಿಕೆಟ್ ನೀಡಲಾಗಿದೆ.
ಅವುಗಳ ಪೈಕಿ ಕೆಲ ಹೆಸರುಗಳು ಹೀಗಿದೆ. ಕಾಚರಕನಹಳ್ಳಿ ಪಾಲಿಕೆ ಸದಸ್ಯ ಪದ್ಮನಾಭರೆಡ್ಡಿ ಸರ್ವಜ್ಞನಗರದಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ರಾಮಸ್ವಾಮಿಪಾಳ್ಯ ವಾರ್ಡ್‌ನ ಮಾಜಿ ಕಾರ್ಪೋರೇಟರ್ ಎನ್ ಚಂದ್ರ ಶಿವಾಜಿನಗರ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಶಾಂತಲಾನಗರದಲ್ಲಿ ಕಾರ್ಪೋರೇಟರ್ ಆಗಿದ್ದ ಶಿವಕುಮಾರ್ ಶಾಂತಿನಗರದ ಟಿಕೆಟ್ ಗಳಿಸಿದ್ದಾರೆ. ವಿಜಯನಗರದ ಪಾಲಿಕೆ ಸದಸ್ಯರಾಗಿದ್ದ ಎಚ್ ರವೀಂದ್ರ ವಿಜಯನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಪಟ್ಟಾಭಿರಾಮನಗರದ ಪಾಲಿಕೆ ಸದಸ್ಯರಾಗಿದ್ದ ಸಿ.ಕೆ.ರಾಮಮೂರ್ತಿಯವರಿಗೆ ಜಯನಗರ ಕ್ಷೇತ್ರದ ಟಿಕೆಟ್ ಲಭಿಸಿದೆ.
