Monday, March 2, 2026
Homeಚುನಾವಣೆ 2023ಬಿಜೆಪಿ ಟಿಕೆಟ್ ಮಿಸ್: ಕಣ್ಣೀರಿಟ್ಟ ರಘುಪತಿ ಭಟ್, ಕಿಡಿ ಕಾರಿದ ಅಂಗಾರ

ಬಿಜೆಪಿ ಟಿಕೆಟ್ ಮಿಸ್: ಕಣ್ಣೀರಿಟ್ಟ ರಘುಪತಿ ಭಟ್, ಕಿಡಿ ಕಾರಿದ ಅಂಗಾರ

ಬಿಜೆಪಿ ಮೊದಲ ಅಭ್ಯರ್ಥಿ ಪಟ್ಟಿ ಬಿಡುಗಡೆ ಆಗಿದೆ. ಗುಜರಾತ್‌ ಮಾದರಿಯಲ್ಲಿ ಹಲವು ಹಾಲಿ ಶಾಸಕರನ್ನು ಹೊರಗಿಟ್ಟು, ಹೊಸಬರಿಗೆ ಪಕ್ಷ ಟಿಕೆಟ್‌ ನೀಡಿದೆ. ಇದು ಪಕ್ಷದಲ್ಲಿ ಭಾರೀ ಅಸಮಾಧಾನಕ್ಕೂ ಕಾರಣವಾಗಿದೆ. ಉಡುಪಿ ಶಾಸಕ ರಘುಪತಿ ಭಟ್‌ ರಿಗೂ ಟಿಕೆಟ್‌ ನಿರಾಕರಿಸಿದ್ದು, ಅವರು ತಮ್ಮ ನೋವನ್ನು ಹೊರ ಹಾಕಿದ್ದಾರೆ.

ನಾನೊಬ್ಬ ಜಾತಿ ಇಲ್ಲದವ, ಸಣ್ಣ ವ್ಯಕ್ತಿ, ಹಾಗಾಗಿ ನನ್ನನ್ನು ಈಗ ಯಾರಿಗೂ ಬೇಡವಾಗಿದೆ. ಜಗದೀಶ್‌ ಶೆಟ್ಟರ್‌ಗೆ ಅಮಿತ್‌ ಶಾ ಕರೆ ಮಾಡಿದ್ದಾರೆ. ನನಗೆ ಕೇವಲ ಒಬ್ಬ ಜಿಲ್ಲಾಧ್ಯಕ್ಷ ಕರೆ ಮಾಡಿ ಕಾರಣ ತಿಳಿಸಿದ್ದರೂ ಸಾಕಿತ್ತು. ಸೌಜನ್ಯಕ್ಕೂ ನನಗೆ ಯಾವ ನಾಯಕರೂ ಕರೆ ಮಾಡಿಲ್ಲ ಎಂದು ಭಟ್‌ ಹೇಳಿದ್ದಾರೆ.

ನನಗಿನ್ನೂ 54 ವರ್ಷ, ಹೋರಾಟದ ಕಿಚ್ಚಿದೆ. ಸುಮ್ಮನೆ ಮನೆಯಲ್ಲಿ ಕೂರುವವನಲ್ಲ. ಯಾರೇ ನಿಂತರೂ ಗೆಲ್ಲುವ ಹಾಗೆ ಉಡುಪಿಯಲ್ಲಿ ಪಕ್ಷ ಕಟ್ಟಿದ್ದೇನೆ, ಆದರೆ, ಈಗ ನನ್ನ ಅವಶ್ಯಕತೆ ಇಲ್ಲವಾಗಿದೆ. ಪಕ್ಷ ನಡೆಸಿಕೊಂಡ ರೀತಿಗೆ ನನಗೆ ಬೇಸರವಿದೆ. ಏನೂ ಇಲ್ಲದ ನನಗೆ ಮೂರು ಬಾರಿ ಶಾಸಕನಾಗಲು ಪಕ್ಷ ಅವಕಾಶ ಕೊಟ್ಟಿದೆ, ಆದರೆ, ನಾಯಕರು ನಡೆಸಿಕೊಂಡಿರುವ ರೀತಿಯಿಂದ ಬೇಸರಾವಾಗಿದೆ. ಪಾರ್ಟಿ ಈಗ ಬೆಳೆದಿದೆ, ನನ್ನ ಅವಶ್ಯಕತೆ ಇಲ್ಲ ಎಂದು ರಘುಪತಿ ಭಟ್‌ ಅಸಮಾಧಾನ ಹೊರಹಾಕಿದ್ದಾರೆ.

ಪ್ರಚಾರವನ್ನೂ ಮಾಡಲ್ಲ: ಎಸ್‌ ಅಂಗಾರ

ಬಿಜೆಪಿ ಹೈಕಮಾಂಡ್‌ ಟಿಕೆಟ್‌ ನಿರಾಕರಿಸಿರುವ ಕಾರಣ ಸುಳ್ಯ ಶಾಸಕ, ಮೀನುಗಾರಿಕಾ ಸಚಿವ ಎಸ್‌.ಅಂಗಾರ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ‘ಪಕ್ಷ ಟಿಕೆಟ್‌ ನೀಡದಿರುವ ಕುರಿತು ನನಗೆ ಅಸಮಾಧಾನ ಇಲ್ಲ. ಆದರೆ, ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಮಾಡಿರುವ ಕೆಲಸವನ್ನು ಗೌರವಿಸುವ ಕ್ರಮ ಇದಲ್ಲ. ನಾನು ಇನ್ನು ರಾಜಕಾರಣದಲ್ಲಿ ಇರಲ್ಲ. ಚುನಾವಣಾ ಪ್ರಚಾರವನ್ನೂ ಮಾಡುವುದಿಲ್ಲ. ಹೊಸ ಅಭ್ಯರ್ಥಿ ಮತ್ತು ಅವರ ಗೆಲುವನ್ನು ಪಕ್ಷ ನೋಡಿಕೊಳ್ಳಬಹುದು ಎಂದು ಅಂಗಾರ ಹೇಳಿದ್ದಾರೆ.

ಹೆಚ್ಚಿನ ಸುದ್ದಿ