Monday, October 13, 2025
Homeಚುನಾವಣೆ 2023ಶಿಗ್ಗಾವಿಯಲ್ಲಿ ಸಿಎಂ ಭರ್ಜರಿ ರೋಡ್ ಶೋ - ದಿಗ್ಗಜರ ಸಾಥ್

ಶಿಗ್ಗಾವಿಯಲ್ಲಿ ಸಿಎಂ ಭರ್ಜರಿ ರೋಡ್ ಶೋ – ದಿಗ್ಗಜರ ಸಾಥ್

ಹಾವೇರಿ: ಶಿಗ್ಗಾವಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬುಧವಾರ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಚಿತ್ರನಟ ಸುದೀಪ್ ಒಡಗೂಡಿ ನಡೆಸಿದ ರೋಡ್ ಶೋ ನಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.
ಚೆನ್ನಮ್ಮ ವೃತ್ತದಲ್ಲಿರುವ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಿಎಂ ರೋಡ್ ಶೋಗೆ ಚಾಲನೆ ನೀಡಿದರು. ಸಂತೇ ಮೈದಾನ, ಹಳೆ ಬಸ್ ನಿಲ್ದಾಣದ ಮೂಲಕ ತಾಲೂಕು ಕ್ರೀಡಾಂಗಣದವರೆಗೂ ನಡೆದ ಮೆರವಣಿಗೆಯಲ್ಲಿ ಹಲವು ಜನಪದ ಕಲಾ ತಂಡಗಳು ಭಾಗವಹಿಸಿದ್ದವು.
ಬಿಜೆಪಿ ಬಾವುಟಗಳೊಂದಿಗೆ, ಸುದೀಪ್ ಬ್ಯಾನರ್ ಮತ್ತು ಬಾವುಟಗಳೂ ಸಹ ಅಲ್ಲಲ್ಲಿ ರಾರಾಜಿಸುತ್ತಿರುವುದು ಕಂಡು ಬಂತು. ಸುಡುವ ಬಿಸಿಲನ್ನೂ ಲೆಕ್ಕಿಸಿದೆ ಸಾವಿರಾರು ಮಂದಿ ಮೆರವಣಿಗೆಯೊಂದಿಗೆ ಜಯಘೋಷ ಕೂಗುತ್ತಾ ಹೆಜ್ಜೆ ಹಾಕಿದರು.
ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಬಹಿರಂಗ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸಿಎಂ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಸಿಎಂ, ಈ ಬಾರಿ ದಾಖಲೆ ಮತಗಳಿಂದ ಗೆಲ್ಲುತ್ತೇನೆ. ವಿಜಯೋತ್ಸವದ ರೀತಿಯಲ್ಲಿ ಜನರು ಬೆಂಬಲ ನೀಡಿದ್ದಾರೆ. ಇಡೀ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಗುರುತರ ಹೊಣೆಗಾರಿಕೆ ನನ್ನ ಮೇಲಿರುವುದರಿಂದ ಈ ಜನಸ್ಪಂದನೆ ನೋಡಿ ನನಗೆ ಮತ್ತಷ್ಟು ಹುರುಪು ಸಿಕ್ಕಿದಂತಾಗಿದೆ ಎಂದರು.
ಚಿತ್ರನಟ ಸುದೀಪ್ ಪ್ರಚಾರದ ಬಗ್ಗೆ ಪ್ರತಿಕ್ರಿಯಿಸಿ, ಕಿಚ್ಚ ಸುದೀಪ್ ನನಗೆ ಅತ್ಯಂತ ಆತ್ಮೀಯರು, ಅವರನ್ನು ಸಣ್ಣ ವಯಸಿನಿಂದ ನಾನು ನೋಡುತ್ತಿದ್ದೇನೆ. ಅವರ ಬೆಂಬಲದಿಂದ ಸಾಕಷ್ಟು ಮಂದಿ ಯುವಜನತೆಯ ಬೆಂಬಲ ಹರಿದುಬಂದಿದೆ ಎಂದರು.
ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ಪ್ರತಿಕ್ರಿಯಿಸಿ, ಎದುರಾಳಿಗಳ ಬಗ್ಗೆ ನನಗೆ ಗೊತ್ತಿಲ್ಲ. ಅದರು ಕಾಂಗ್ರೆಸ್ ಪಕ್ಷದ ಆಂತರಿಕ ಪ್ರಶ್ನೆ. ನಾನು ಗೆಲ್ಲುವುದಂತೂ ಖಚಿತ ಎಂದು ಸಿಎಂ ನುಡಿದಿದ್ದಾರೆ.

ಹೆಚ್ಚಿನ ಸುದ್ದಿ