ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮೊಯ್ದೀನ್ ಬಾವಾ ಅವರಿಗೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಚಿವ ಯು.ಟಿ.ಖಾದರ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮೋಯ್ದೀನ್ ಬಾವಾ, ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಟಿಕೆಟ್ನ್ನು ಮಾರಾಟ ಮಾಡಿದ್ದು, ಹಾಲಿ ಅಭ್ಯರ್ಥಿ ಇನಾಯತ್ ಅಲಿ ಟಿಕೆಟ್ಗಾಗಿ 2 ಕೋಟಿ ರೂ. ಕೊಟ್ಟಿದ್ದಾರೆ. ಇನಾಯತ್ ಅಲಿ ಡಿಕೆ ಶಿವಕುಮಾರ್ ಅವರ ಬಿಸ್ನೆಸ್ ಪಾರ್ಟ್ನರ್. ಇನಾಯತ್ ತಮ್ಮನಿಗೆ ಡಿಕೆಶಿ ವಿಚಾರವಾಗಿ ಇಡಿ, ಡ್ರಿಲ್ ಮಾಡಿತ್ತು. ಇದೇ ಕಾರಣಕ್ಕೆ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ವಿರುದ್ಧ ಭ್ರಷ್ಟಾಚಾರ ಕುರಿತು ಮಾತನಾಡಲು ಕಾಂಗ್ರೆಸ್ಗೆ ನೈತಿಕತೆ ಇಲ್ಲ. ಯಾವುದೇ ಪ್ರಭಾವ ಇಲ್ಲದೇ ರಾಹುಲ್ ಗಾಂಧಿಯವರು ಕಳಿಸಿದ ಸರ್ವೇ ಟೀಂ ಆಧಾರದಲ್ಲಿ ಟಿಕೆಟ್ ಎಂದು ಹೇಳಿದ್ದರು. ಸಿಇಸಿ ಚೇರ್ಮನ್ ಮೋಹನ್ ಪ್ರಕಾಶ್ ಸಮೀಕ್ಷೆ ರಿಪೋರ್ಟ್ ನನಗೆ ತೋರಿಸಿದ್ದರು ಎಂದಿದ್ದಾರೆ.
ಈ ರಿಪೋರ್ಟ್ ಅಲ್ಲಿ 78% ಜನರು ನನಗೆ ಆಶೀರ್ವಾದ ಮಾಡಿದ್ದರು, 7% ಈಗಿನ ಅಭ್ಯರ್ಥಿ ಪರ ಇತ್ತು. ಹೀಗಾಗಿ ಮೋಹನ್ ಪ್ರಕಾಶ್ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡಿ ಅಂದಿದ್ರು. ಆದರೆ ರಾಹುಲ್ ಗಾಂಧಿ ಕೋಲಾರಕ್ಕೆ ಬಂದಾಗ, ಇನಾಯತ್ ಆಲಿ ಲಾಬಿ ಮಾಡಿದರೂ ರಾಹುಲ್ ಗಾಂಧಿ ಗಮನ ಕೊಟ್ಟಿಲ್ಲ. ಇದಾದ ಬಳಿಕ ಡಿಕೆ ಶಿವಕುಮಾರ ಅವರು ಖರ್ಗೆ ಜೊತೆ ಹೋಗಿ ನನ್ನ ಹೆಸರು ತಡೆದಿದ್ದಾರೆ. ವಾಮಮಾರ್ಗ ಉಪಯೋಗಿಸಿ ಕಾಂಗ್ರೆಸ್ ಟಿಕೆಟ್ ತಪ್ಪಿಸಿದ್ದಾರೆ. ಇದು ಟಿಕೆಟ್ ಮಾರಾಟ, ಕಾಂಗ್ರೆಸ್ ಪಕ್ಷಕ್ಕೆ ಇದು ಶೇಮ್ ಎಂದಿದ್ದಾರೆ.
