Monday, October 13, 2025
Homeವಿದೇಶಜೈಲಿನಲ್ಲಿದ್ದ ಕೈದಿಯನ್ನ ತಿಂದುಮುಗಿಸಿದ ಕೀಟಗಳು

ಜೈಲಿನಲ್ಲಿದ್ದ ಕೈದಿಯನ್ನ ತಿಂದುಮುಗಿಸಿದ ಕೀಟಗಳು

ವಾಷಿಂಗ್ಟನ್: ಸಿನಿಮೀಯ ಮಾದರಿಯಲ್ಲಿ ಕೀಟಗಳು ಮತ್ತು ತಿಗಣೆ ಕೈದಿಯೊಬ್ಬನನ್ನ ಜೀವಂತವಾಗಿ ತಿಂದುಹಾಕಿರುವ ಭಯಾನಕ ಘಟನೆ ನಡೆದಿದೆ. ಅಮೆರಿಕದ ಅಟ್ಲಾಂಟಾದ ಜೈಲಿನಲ್ಲಿದ್ದ 35 ವರ್ಷದ ಕೈದಿಯೊಬ್ಬನನ್ನು ಕೀಟಗಳು ಮತ್ತು ತಿಗಣೆ ತಿಂದು ಹಾಕಿವೆ ಎಂದು ಸಂತ್ರಸ್ತರ ಕುಟುಂಬದ ವಕೀಲರು ಆರೋಪಿಸಿದ್ದಾರೆ. 

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮೃತ ವ್ಯಕ್ತಿಯ ಕುಟುಂಬ ಈ ಸಾವಿನ ಬಗ್ಗೆ ಕ್ರಿಮಿನಲ್ ತನಿಖೆಗೆ ಒತ್ತಾಯಿಸಿದ್ದು, ಜೈಲನ್ನು ಮುಚ್ಚಬೇಕು ಮತ್ತು ಅಲ್ಲಿನ ಕೈದಿಗಳನ್ನ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದೆ. ಅಮೆರಿಕ ಪೊಲೀಸರ ಪ್ರಕಾರ, 2022ರ ಜೂನ್ 12 ರಂದು ಲಾಶಾನ್ ಥಾಂಪ್ಸನ್ ಎಂಬ ವ್ಯಕ್ತಿಯನ್ನ ಅಟ್ಲಾಂಟಾದಲ್ಲಿ ಬಂಧಿಸಿ, ಫುಲ್ಟನ್ ಕೌಂಟಿ ಜೈಲಿಗೆ ಕರೆದೊಯ್ಯಲಾಗಿತ್ತು. ಆದರೆ ವಿಚಾರಣೆಯ ನಂತರ ಆತನನ್ನ ಮಾನಸಿಕ ಅಸ್ವಸ್ಥ ಎಂದು ಪರಿಗಣಿಸಿ ಮನೋವೈದ್ಯಕೀಯ ವಿಭಾಗದಲ್ಲಿರಿಸಲಾಗಿತ್ತು.

ಈ ನಡುವೆ ಪೊಲೀಸರು ಸಿಆರ್‌ಪಿಸಿ ಅನ್ವಯ ತನಿಖೆ ಪ್ರಕ್ರಿಯೆ ಆರಂಭಿಸಿದ್ದರು. ಆತನ ಹೇಳಿಕೆ ಪಡೆಯಲು 2022ರ ಸೆಪ್ಟೆಂಬರ್ 13ರಂದು ಹೋದಾಗ ಥಾಂಪ್ಸನ್ ಪ್ರತಿಕ್ರಿಯಿಸಲಿಲ್ಲ. ಅದಾದ 3 ತಿಂಗಳ ನಂತರ ಆತ ಕೊಠಡಿಯಲ್ಲೇ ಮೃತಪಟ್ಟಿದ್ದ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಂತ್ರಸ್ತ ಕುಟುಂಬ ಪರ ವಕೀಲರು, ಥಾಂಪ್ಸನ್ ಅವರನ್ನ ಕೊಳಕು ತುಂಬಿದ ಕೋಣೆಯಲ್ಲಿ ಇರಿಸಲಾಗಿತ್ತು. ಹಾಗಾಗಿ ತಾನು ಮಲಗುತ್ತಿದ್ದ ಹಾಸಿಗೆಯಲ್ಲಿ ಕೀಟಗಳು ಹೆಚ್ಚಾಗಿ, ಮೂರು ತಿಂಗಳ ನಂತರ ಆತನನ್ನು ಕೀಟಗಳಿಂದ ಜೀವಂತವಾಗಿ ತಿಂದುಮುಗಿಸಿವೆ. ಇದಕ್ಕೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದ್ದಾರೆ.

ಮರಣೋತ್ತರ ಪರೀಕ್ಷಾ ವರದಿ ಸಹ ಅವರ ದೇಹದಲ್ಲಿ ಗಾಯಗಳಿಲ್ಲ ಹಾಗೂ ರೋಗ ಲಕ್ಷಣಗಳೂ ಇರಲಿಲ್ಲ ಎಂಬುದನ್ನು ತಿಳಿಸಿದೆ. ಫುಲ್ಟನ್ ಕೌಂಟಿ ಜೈಲಿನ ಅನೈರ್ಮಲ್ಯ ಪರಿಸ್ಥಿತಿಯೇ ಥಾಂಪ್ಸನ್ ಸಾವಿಗೆ ಕಾರಣ. ಜೈಲಿನ ಕೊಠಡಿಗಳ ಶುಚಿತ್ವ ಗಮನಿಸಿದರೂ ಯಾರೊಬ್ಬರೂ ಸಹಾಯ ಮಾಡಿಲ್ಲ. ಜೈಲಿನೊಳಗೆ ತೆಗೆದ ಚಿತ್ರಗಳನ್ನು ನೋಡಿದ್ರೆ ಎಷ್ಟು ಕೊಳಕು ತುಂಬಿಕೊಂಡಿತ್ತು ಅನ್ನೋದು ಅರ್ಥವಾಗುತ್ತೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ತನಿಖೆಗೆ ಸೂಚನೆ: ಈ ಬಗ್ಗೆ ಉನ್ನತ ಮೂಲದ ಅಧಿಕಾರಿಗಳು ಪೂರ್ಣ ಸಂಬಂಧಪಟ್ಟ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಎಲ್ಲಾ ಕೈದಿಗಳಿಗೂ ಹಾಸಿಗೆ ಹಾಗೂ ಇತರ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಸೂಚನೆ ನೀಡಿದ್ದು, ಅದಕ್ಕಾಗಿ 5 ಲಕ್ಷ ಡಾಲರ್ (ಸುಮಾರು 4 ಕೋಟಿ ರೂ) ಮಂಜೂರು ಮಾಡಲಾಗಿದೆ. ಜೊತೆಗೆ ಜೈಲಿನಲ್ಲಿರುವ ಕೈದಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಆದೇಶಿಸಿದೆ.

ವೈದ್ಯರು ಹೇಳಿದ್ದೇನು?: ಹಾಸಿಗೆಯಲ್ಲಿರುವ ಕೀಟಗಳು ಕಚ್ಚುವುದರಿಂದ ಮರಣ ಸಂಭವಿಸುವುದಿಲ್ಲ. ಆದರೆ ಕೆಲವೊಂದು ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಕೀಟಗಳು ಮುತ್ತಿಕೊಂಡಾಗ, ಅದೇ ಸ್ಥಿತಿಯಲ್ಲಿ ದೀರ್ಘಕಾಲದ ವರೆಗೆ ಮುಂದುವರಿದರೇ ತೀವ್ರವಾಗಿ ರಕ್ತಹೀನತೆ ಉಂಟಾಗುತ್ತದೆ. ಕಾಲಮಿತಿಯಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ಬೇಗನೆ ಸಾವು ಸಂಭವಿಸುತ್ತದೆ ಎಂದು ಕೆಂಟುಕಿ ವಿಶ್ವವಿದ್ಯಾಲಯದ ಕೀಟಶಾಸ್ತ್ರಜ್ಞ ಮೈಕೆಲ್ ಪಾಟರ್ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ