ಬೆಂಗಳೂರು: ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗದ ಹಿನ್ನೆಲೆ ಅಸಮಾಧಾನಗೊಂಡಿರುವ ಅಖಂಡ ಶ್ರೀನಿವಾಸಮೂರ್ತಿ ತಮ್ಮ ಶಾಸಕ ರಾಜಿನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಡಿಜೆ ಹಳ್ಳಿ- ಕೆಜಿ ಹಳ್ಳಿ ಗಲಭೆಗೆ ಶಾಸಕ ಅಖಂಡ ಅವರೇ ಕಾರಣ ಎಂದು ಒಂದು ವರ್ಗದ ಮುಸ್ಲಿಂ ಮುಖಂಡರು ಅವರಿಗೆ ಟಿಕೆಟ್ ನೀಡದಂತೆ ಕಾಂಗ್ರೆಸ್‌ಗೆ ಒತ್ತಡ ಹೇರಿದ್ದು, ಹೀಗಾಗಿ, ಶ್ರೀನಿವಾಸಮೂರ್ತಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ.
ಡಿಜೆ ಹಳ್ಳಿ ಗಲಭೆ ಬಳಿಕ ಕಾಂಗ್ರೆಸ್ ಮೇಲೆ ಅಸಮಾಧಾನ ಸ್ಥಳೀಯರಲ್ಲಿ ಮನೆ ಮಾಡಿದ್ದು, ಎಸ್‌ಡಿಪಿಐ ಕೂಡಾ ದಲಿತ ಹಿನ್ನೆಲೆಯ ಅಭ್ಯರ್ಥಿಯನ್ನು ಪುಲಕೇಶಿ ನಗರದಲ್ಲಿ ಹಾಕಿದೆ. ದಲಿತ-ಮುಸ್ಲಿಂ ನಿರ್ಣಾಯಕ ಮತಗಳನ್ನು ಎಸ್‌ಡಿಪಿಐ ಸೆಳೆಯಲು ಸಾಧ್ಯವಾದರೆ ಕಾಂಗ್ರೆಸ್ ಅಭ್ಯರ್ಥಿ ಸೋಲುವ ಭೀತಿ ಕಾಂಗ್ರೆಸಿನಲ್ಲಿ ಇದೆ.
ಈ ಹಿನ್ನೆಲೆಯಲ್ಲಿ ಸಮರ್ಥ ಹಾಗೂ ವಿವಾದಗಳಿಲ್ಲದೆ ಇರುವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯೋಚಿಸುತ್ತಿದೆ.
ಅಖಂಡ ಶ್ರೀನಿವಾಸಮೂರ್ತಿ ಸಿದ್ದರಾಮಯ್ಯ ಬೆಂಬಲಿಗ ಶಾಸಕರಾಗಿದ್ದು, ಈಗಾಗಲೇ ಝಮೀರ್ ಅಹ್ಮದ್ ಅಖಂಡ ಪರವಾಗಿ ಮುಸ್ಲಿಂ ಮುಖಂಡರನ್ನು ಮನವೊಲಿಸುವ ಕೆಲಸ ಮಾಡಿದ್ದರು. ಆದರೆ ಅದು ನಿರೀಕ್ಷಿತ ಫಲ ಕೊಟ್ಟಿರಲಿಲ್ಲ.
