ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿನ 30 ಮುಖ್ಯಮಂತ್ರಿಗಳಲ್ಲಿ 29 ಮಂದಿ ಕೋಟ್ಯಾಧಿಪತಿಗಳಾಗಿದ್ದು, ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ಒಟ್ಟು 510 ಕೋಟಿ ರೂ. ಆಸ್ತಿ ಹೊಂದಿ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಅಥವಾ ಎಡಿಆರ್ ವರದಿ ತಿಳಿಸಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸುಮಾರು 15 ಲಕ್ಷ ರೂ.ಗಳಷ್ಟು ಆಸ್ತಿ ಹೊಂದಿದ್ದು, ಸಿಎಂಗಳಲ್ಲಿ ಅತ್ಯಂತ ಕಡಿಮೆ ಆಸ್ತಿ ಹೊಂದಿರುವವರು ಎಂದು ವರದಿ ಹೇಳಿದೆ.
30 ಸಿಎಂಗಳ ಪೈಕಿ 29 ಮಂದಿ (ಶೇ. 97) ಕೋಟ್ಯಾಧಿಪತಿಗಳಾಗಿದ್ದು, ಪ್ರತಿ ಸಿಎಂ ಸರಾಸರಿ ಆಸ್ತಿ 33.96 ಕೋಟಿ ರೂ. ಆಗಿದೆ. 30 ಸಿಎಂಗಳ ಪೈಕಿ 13 (ಶೇ. 43) ಮಂದಿ ಕೊಲೆ, ಕೊಲೆ ಯತ್ನ, ಅಪಹರಣ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ 510 ಕೋಟಿ ರೂ.ಗಿಂತ ಹೆಚ್ಚು, ಅರುಣಾಚಲ್ ಪ್ರದೇಶದ ಪೇಮಾ ಖಂಡು 163 ಕೋಟಿ ರೂಪಾಯಿಗಿಂತ ಹೆಚ್ಚು ಮತ್ತು ಒಡಿಶಾದ ನವೀನ್ ಪಟ್ನಾಯಕ್ ರೂ. 63 ಕೋಟಿಗಿಂತ ಹೆಚ್ಚು ಆಸ್ತಿ ಹೊಂದಿದ್ದು, ಅಗ್ರ ಮೂರು ಮುಖ್ಯಮಂತ್ರಿಗಳು ಎಂದು ಎಡಿಆರ್ ತಿಳಿಸಿದೆ.