ಚೆನ್ನೈ: ತಮಿಳುನಾಡು ಬಿಜೆಪಿ ಮುಖ್ಯಸ್ಥ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ 4 ಲಕ್ಷ ರೂಪಾಯಿ ಬೆಲೆಬಾಳುವ ರಫೇಲ್ ವಾಚ್ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಈ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿರುವ ಅಣ್ಣಾಮಲೈ ಇದು ತಾನು ಖರೀದಿಸಿದ ವಾಚ್ ಎಂದಿದ್ದಾರೆ. ಈ ನಿಟ್ಟಿನಲ್ಲಿ ಹಣ ಪಾವತಿಸಿದ ರಶೀದಿಗಳನ್ನು ಬಿಡುಗಡೆಗೊಳಿಸಿದ್ದಾರೆ.
2021 ಮೇ 27ರಂದು ಕೊಯಮತ್ತೂರು ಮೂಲದ ಸ್ನೇಹಿತರಿಂದ ವಾಚ್ ಖರೀದಿಸಿದ್ದೇನೆ ಎಂದ ಅಣ್ಣಾಮಲೈ ಬಿಲ್‌ನ ಪ್ರತಿಯನ್ನು ಬಿಡುಗಡೆ ಮಾಡಿದರು.
ತಾನು ಚೆರಲತನ್ ರಾಮಕೃಷ್ಣನ್ ಎಂಬ ವ್ಯಕ್ತಿಯಿಂದ ವಾಚ್ ಖರೀದಿಸಿದ್ದೆ. ಡಸ್ಸೋ ಏವಿಯೇಷನ್ ಬೆಲ್ ಮತ್ತು ರಾಸ್ ಸಹಯೋಗದೊಂದಿಗೆ ಈ ವಿಶೇಷ ರಫೇಲ್ ವಾಚ್‌ಗಳನ್ನು ತಯಾರಿಸುತ್ತದೆ. ತಯಾರಾದ 500 ಒಟ್ಟು ವಾಚ್‌ಗಳಲ್ಲಿ ಎರಡನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡಲಾಗಿದೆ.
ಈ ವಾಚ್ ನ ಒಟ್ಟು ಮೌಲ್ಯ 4,50,000 ರೂ. ಆಗಿದ್ದು, ರಾಮಕೃಷ್ಣನ್ ಖರೀದಿಸಿದ 2 ತಿಂಗಳ ನಂತರ 3 ಲಕ್ಷ ರೂಪಾಯಿಗೆ ಅಣ್ಣಾಮಲೈ ಅವರಿಗೆ ಮಾರಿದ್ದರು ಎನ್ನಲಾಗಿದೆ.
