ತೀರ್ಥಹಳ್ಳಿ: ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸವನ್ನು ನಾನು ಮಾಡಿದ್ದೇನೆ. ಬೇಕಾದರೆ ಅದಕ್ಕೆ ಆಧಾರವನ್ನು ಕೊಡುತ್ತೇನೆ. ಯಾರದ್ದೋ ಮಕ್ಕಳಿಗೆ ನಾನು ತಂದೆ ಎಂದು ಹೇಳಿಕೊಳ್ಳುವ ಸಣ್ಣತನ ನನ್ನಲಿಲ್ಲ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಸಿಡಿಮಿಡಿಯಾಗಿದ್ದಾರೆ.
ಶನಿವಾರ ಪಟ್ಟಣದ ಬಂಟರಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1983 ಚುನಾವಣೆಯಿಂದ 9 ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಈಗ ಹತ್ತನೇ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಕಳೆದ 9 ಬಾರಿ ಚುನಾವಣೆಯಲ್ಲಿ ನಾಲ್ಕು ಬಾರಿ ಗೆದ್ದು 5 ಬಾರಿ ಸೋತಿದ್ದೇನೆ. ನನ್ನ ಸ್ವಂತ ಜೀವನಕ್ಕೆ ಸ್ವಲ್ಪ ಮಾತ್ರ ಸಮಯ ವನ್ನು ಕೊಟ್ಟು ರಾಜಕೀಯಕ್ಕಾಗಿ ಸಮಾಜದ ಜೀವನಕ್ಕಾಗಿ ಕೊಟ್ಟಿದ್ದೇನೆ ಎಂದರು.
ಎಪ್ರಿಲ್ 17ರ ಮಂಗಳವಾರದಂದು ಬೆಳಗ್ಗೆ 10-30 ಕ್ಕೆ ನಾನು ಉಮೇದುವಾರಿಕೆ ಯನ್ನು ಸಲ್ಲಿಸುತ್ತಿದ್ದೇನೆ. ಇಲ್ಲಿಯವರೆಗೆ ಪಕ್ಷಾಂತರ ನನ್ನ ಹತ್ತಿರಕ್ಕೂ ಸುಳಿಯಲಿಲ್ಲ. ಇವತ್ತು, ನಮ್ಮ ಪಕ್ಷ ದಲಿತರ ಕೇರಿಯಲ್ಲಿದೆ. ರೈತರ ಜಮೀನಿನಲ್ಲಿದೆ. ಸರ್ವವ್ಯಾಪಿ ಸರ್ವಸ್ಪರ್ಶಿ ಆಗಿರುವಂತಹ ರೀತಿಯಲ್ಲಿ ಪಕ್ಷವನ್ನು ಕಟ್ಟಿದ್ದೇವೆ.
ಈ ಕ್ಷೇತ್ರದ ಸುಸಂಸ್ಕೃತ ಮತದಾರರು ಅಚ್ಚರಿ ಪಡುವಂತಹ ರೀತಿಯಲ್ಲಿ 3254 ಕೋಟಿ ರೂಗಳನ್ನು ಇಲ್ಲಿಯವರೆಗೆ ತಂದಿದ್ದೇನೆ. ಜಲಜೀವನ್ ಮಿಷನ್ ಮತ್ತು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಕೇವಲ ಕುಡಿಯುವ ನೀರು ಒಂದಕ್ಕೆ 700 ಕೋಟಿ ಅಧಿಕ ಹಣವನ್ನು ತಂದಿದ್ದೇನೆ. ಕ್ಷೇತ್ರದ ಯಾವುದೇ ಭಾಗಕ್ಕೆ ಹೋದರು ಹೊಸ ರಸ್ತೆಗಳು, ಕಾಲು ಸಂಖಗಳು ಸೇತುವೆಗಳು, ಸಮುದಾಯ ಭವನಗಳು, ಶಾಲಾ ಕಟ್ಟಡ ಇವೆಲ್ಲವೂ ಸಾಮಾನ್ಯ ಜನರ ಗೋಚರ ಆಗುವಂತಹ ರೀತಿಯಲ್ಲಿ ಪ್ರಗತಿಯಾ ಗುತ್ತಿದೆ. ಯಾವುದೇ ಜನ ಪ್ರತಿನಿಧಿ ಇಲ್ಲಿಯವರೆಗೆ ತರದಂತಹ ದಾಖಲೆ ಹಣವನ್ನು ಅಭಿವೃದ್ಧಿಗಾಗಿ ತೀರ್ಥಹಳ್ಳಿ ಕ್ಷೇತ್ರಕ್ಕೆ ತಂದಿದ್ದೇನೆ.
ನಾನು ಮಾಡಿದ ಕೆಲಸ ಮಾತ್ರ ನಂದು ಎನ್ನುತ್ತೇನೆ.. ಬೇರೆಯವರು ಮಾಡಿದ ಕೆಲಸ ನನ್ನದು ಎಂದು ಹೇಳಿ ಬೇರೆಯವರ ಮಕ್ಕಳಿಗೆ ನಾನು ತಂದೆಯಾಗಲು ಸಿದ್ಧನಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದ್ರು.