Saturday, June 27, 2026
Homeಚುನಾವಣೆ 2023ಬಿಜೆಪಿ ಭಿನ್ನಮತ: ಬಂಡಾಯವೆದ್ದವರ ಪಟ್ಟಿ ಇಲ್ಲಿದೆ

ಬಿಜೆಪಿ ಭಿನ್ನಮತ: ಬಂಡಾಯವೆದ್ದವರ ಪಟ್ಟಿ ಇಲ್ಲಿದೆ

ಕೊನೆಗೂ ಬಿಜೆಪಿ 212 ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ 16 ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿದ್ದು, ಹಲವೆಡೆ ಬಂಡಾಯದ ಕಹಳೆ ಮೊಳಗಿದೆ. ಇದುವರೆಗೂ 12 ಕ್ಕೂ ಅಧಿಕ ನಾಯಕರು ಬಂಡಾಯವೆದ್ದಿದ್ದಾರೆ. ಇನ್ನು ಕೆಲವರು ನಿವೃತ್ತಿ ಘೋಷಿಸಿ, ರಾಜಕಾರಣದಿಂದ ದೂರ ಸರಿಯುವ ಬಗ್ಗೆ ಮಾತನಾಡಿದ್ದಾರೆ. ಈಶ್ವರಪ್ಪ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದರೆ, ಸುಳ್ಯ ಶಾಸಕ ಅಂಗಾರ ರಾಜಕೀಯದಿಂದಲೇ ನಿರ್ಗಮಿಸುವುದಾಗಿ ಘೋಷಿಸಿದ್ದಾರೆ.

ಬಂಡಾಯ ಎದ್ದವರ ಪಟ್ಟಿ

ಎಂ.ಪಿ ಕುಮಾರಸ್ವಾಮಿ ಮೂಡಿಗೆರೆ

ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿಯವರಿಗೆ ಟಿಕೆಟ್‌ ಕೈ ತಪ್ಪಿದೆ. ಬಂಡಾಯದ ಸೂಚನೆಯನ್ನೂ ಅವರೂ ನೀಡಿದ್ದು, ಸಿ.ಟಿ ರವಿ ವಿರುದ್ಧ ಕಿಡಿಕಾರಿದ್ದಾರೆ.

ಅಥಣಿ- ಲಕ್ಷ್ಮಣ್ ಸವದಿ

ಬೆಳಗಾವಿಯ ಅಥಣಿಯಲ್ಲಿ ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿದ ಮಹೇಶ್ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದು ಅಲ್ಲಿನ ಟಿಕೆಟ್‌ ಆಕಾಂಕ್ಷಿ ಲಕ್ಷ್ಮಣ್‌ ಸವದಿ ಅಸಮಾಧಾನಕ್ಕೆ ಕಾರಣವಾಗಿದೆ.

ಆರ್ ಶಂಕರ್ ರಾಣೇಬೆನ್ನೂರು

ರಾಣೇಬೆನ್ನೂರು ಕ್ಷೇತ್ರದಿಂದ ಟಿಕೆಟ್‌ ಕೈ ತಪ್ಪಿದ್ದರಿಂದ ವಿಧಾನ ಪರಿಷತ್ ಸದಸ್ಯ ಆರ್‌ ಶಂಕರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಗೂಳಿಹಟ್ಟಿ ಶೇಖರ್ ಹೊಸದುರ್ಗ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಬಿಜೆಪಿ ತೊರೆದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಘೋಷಿಸಿದ್ದಾರೆ. ಟಿಕೆಟ್‌ ಕೈ ತಪ್ಪಿದ ಆಕ್ರೋಶ ಗೂಳಿಹಟ್ಟಿ ಶೇಖರ್‌ಗಿದೆ.

ಸೊಗಡು ಶಿವಣ್ಣ ತುಮಕೂರು ನಗರ 

ತುಮಕೂರು ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸೊಗಡು ಶಿವಣ್ಣರ  ಬದಲು ಹಾಲಿ ಶಾಸಕ ಜ್ಯೋತಿಗಣೇಶ್‌ಗೆ ಬಿಜೆಪಿ ಮಣೆ ಹಾಕಿದೆ. ಇದರಿಂದ ಬಂಡಾಯವೆದ್ದಿರುವ ಸೊಗಡು ಶಿವಣ್ಣ ಬಿಜೆಪಿ ತೊರೆಯುವುದಾಗಿ ಘೋಷಿಸಿದ್ದಾರೆ.

 ದೊಡ್ಡಪ್ಪಗೌಡ ಪಾಟೀಲ್ ಜೇವರ್ಗಿ

ಜೇವರ್ಗಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿದ್ದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳರವರು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಚಿಕ್ಕನಗೌಡ್ರುಕುಂದಗೋಳ

ಕುಂದಗೋಳ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಎಸ್‌.ಐ ಚಿಕ್ಕನಗೌಡ್ರುರವರಿಗೆ ಟಿಕೆಟ್ ಕೈ ತಪ್ಪಿದೆ. ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದು ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ

 ನೆಹರೂ ಓಲೇಕಾರ್‌ ಹಾವೇರಿ

ಹಾವೇರಿಯಲ್ಲಿ ಈ ಬಾರಿಯ ಬಿಜೆಪಿ ಟಿಕೆಟ್ ನೆಹರೂ ಓಲೇಕಾರ್‌ರವರಿಗೆ ಸಿಕ್ಕಿಲ್ಲ. ಅವರ ಬದಲಿಗೆ ಗವಿಸಿದ್ದಪ್ಪ ದ್ಯಾಮಣ್ಣನವರ್‌ ನವರಿಗೆ ಬಿಜೆಪಿ ಟಿಕೆಟ್ ಒಲಿದಿದೆ. ಹಾಗಾಗಿ ನೆಹರೂ ಓಲೇಕಾರ್ ಅಸಮಾಧಾನಗೊಂಡಿದ್ದಾರೆ. ಅಲ್ಲದೆ, ಸಿಎಂ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.

ಮುದ್ದಹನುಮೇಗೌಡ ಕುಣಿಗಲ್

ಕುಣಿಗಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಸ್‌ಪಿ ಮುದ್ದಹನುಮೇಗೌಡ ಟಿಕೆಟ್ ನೀಡದಿದ್ದಕ್ಕೆ ಬೇಸರಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲು ನಿರ್ಧರಿಸಿದ್ದಾರೆ .

ಹೂಡಿ ವಿಜಯ್ ಕುಮಾರ್ ಮಾಲೂರು

ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಮಾಲೂರು ಟಿಕೆಟ್ ಕೈತಪ್ಪಿರುವುದರಿಂದ ಹೂಡಿ ವಿಜಯ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.  

ಎನ್.ಆರ್ ಸಂತೋಷ್ ಅರಸೀಕೆರೆ

ಬಿಜೆಪಿ ಟಿಕೆಟ್‌ಗಾಗಿ ಎನ್.ಆರ್ ಸಂತೋಷ್ ಯತ್ನಿಸಿದ್ದರು. ಆದರೆ ಬಿಜೆಪಿ ಜಿ.ವಿ ಬಸವರಾಜುರವರಿಗೆ ಮಣೆ ಹಾಕಿದೆ. ಇದರಿಂದ ಸಂತೋಷ್ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ  

ನಿತಿನ್ ಗುತ್ತೇದಾರ ಅಫಜಲಪುರ

ಅಫಜಲಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಸಿಗದೆ ಇರುವುದರಿಂದ ನಿತಿನ್ ಗುತ್ತೇದಾರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಶಹಾಪುರ ಗುರು ಪಾಟೀಲ ಶಿರವಾಳ

ಶಹಾಪುರದ ಮಾಜಿ ಶಾಸಕ ಗುರು ಪಾಟೀಲ ಶಿರವಾಳರವರು ಬಿಜೆಪಿ ಟಿಕೆಟ್ ಸಿಗದ ಕಾರಣ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಜಗದೀಶ್ ಶೆಟ್ಟರ್ ಹುಬ್ಬಳ್ಳಿ ಕೇಂದ್ರ

  ಪಕ್ಷದ ವರಿಷ್ಠರು ತಮಗೆ ಟಿಕೆಟ್ ನೀಡುತ್ತಿಲ್ಲ ಎಂದು ತಿಳಿಸಿದ್ದರಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗರಂ ಆಗಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಅಸಮಾಧಾನ ಹೊಂದಿರುವ ನಾಯಕರು

ಎಸ್.ಅಂಗಾರಸುಳ್ಯ

ಸುಳ್ಯ ಕ್ಷೇತ್ರದ ಶಾಸಕರೂ ಆಗಿರುವ ಮೀನುಗಾರಿಕಾ ಸಚಿವ ಎಸ್‌.ಅಂಗಾರ ಅವರಿಗೆ ಟಿಕೆಟ್ ಸಿಗದಿರುವ ಕಾರಣಕ್ಕೆ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಪ್ರಚಾರಕ್ಕೂ ಬರಲ್ಲ ಎಂದು ಅವರು ಘೋಷಿಸಿದ್ದಾರೆ.

ರಘುಪತಿ ಭಟ್ ಉಡುಪಿ

ಉಡುಪಿ ಟಿಕೆಟ್ ಸಿಗದ ರಘುಪತಿ ಭಟ್ ಕಣ್ಣೀರು ಹಾಕಿದ್ದಾರೆ. ಪಕ್ಷ ತನ್ನನ್ನು ನಡೆಸಿಕೊಂಡದ್ದರ ಬಗ್ಗೆ ಬೇಸರವಿದೆ, ಈಗ ಪಾರ್ಟಿಗೆ ನನ್ನ ಅವಶ್ಯಕತೆ ಇಲ್ಲ ಎಂದು ನೋವು ತೋಡಿದ್ದಾರೆ.

ಕೆ.ಎಸ್ ಈಶ್ವರಪ್ಪ ಶಿವಮೊಗ್ಗ ನಗರ

ಹೈಕಮಾಂಡ್‌ ಟಿಕೆಟ್‌ ನೀಡಲ್ಲ ಎಂದು ತಿಳಿಸಿದ್ದರಿಂದ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗಿದೆ.  

ಜಿ.ಎನ್ ಬೆಟ್ಟಸ್ವಾಮಿ ಗುಬ್ಬಿ

ಗುಬ್ಬಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ.ಎನ್ ಬೆಟ್ಟಸ್ವಾಮಿಯವರಿಗೆ ಟಿಕೆಟ್ ಸಿಕ್ಕಿಲ್ಲ. ಬದಲಿಗೆ ದಿಲೀಪ್ ಕುಮಾರ್ ಬಿಜೆಪಿ ಟಿಕೆಟ್ ಗಿಟ್ಟಿಸಿದ್ದಾರೆ.  

ಹೆಚ್ಚಿನ ಸುದ್ದಿ