ಶಿವಮೊಗ್ಗ: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ಮಾನ್ವಿ ಹಾಗೂ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಗಳಿಗೆ ಇನ್ನು ಅಭ್ಯರ್ಥಿಗಳು ಯಾರು ಎಂಬುದನ್ನುಹೇಳಿಲ್ಲ.
ಕಳೆದ ವಾರ ಬಿಜೆಪಿ ತನ್ನ ಅಭ್ಯರ್ಥಿ ಎರಡನೇ ಪಟ್ಟಿ ಬಿಡುಗಡೆ ಮಾಡಿತ್ತು. ಈ ಹಿಂದಿನ ಎರಡು ಪಟ್ಟಿಗಳಲ್ಲಿ 212 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು. ಇದೀಗ ಮೂರನೇ ಪಟ್ಟಿಯಲ್ಲಿ10 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಬಹುನಿರೀಕ್ಷಿತ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ಮತ್ತು ಮಾನ್ವಿ ವಿಧಾನಸಭಾ ಕ್ಷೇತ್ರಗಳನ್ನು ಹಾಗೆ ಉಳಿಸಿಕೊಂಡಿದ್ದು, ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಶಿವಮೊಗ್ಗ ನಗರ ಕ್ಷೇತ್ರವನ್ನು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿನಿಧಿಸುತ್ತಿದ್ದು, ಈ ಬಾರಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಮಗನ ಭವಿಷ್ಯ ಬೆಳಗಿಸುವ ಕನಸು ಕಾಣುತ್ತಿದ್ದಾರೆ. ಅವರ ಮಗ ಕಾಂತೇಶ್‌ಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆಯಿಟ್ಟಿದ್ದಾರೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ಇಲ್ಲಿಯವರೆಗೂ ಮೂರು ಪಟ್ಟಿಗಳಲ್ಲೂ ಬಿಜೆಪಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಬಿಜೆಪಿಗೆ ಇಲ್ಲಿ ಸೂಡಾದ ಅಧ್ಯಕ್ಷರಾಗಿದ್ದ ಲಿಂಗಾಯತ ಸಮುದಾಯದ ಜ್ಯೋತಿ ಪ್ರಕಾಶ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ತನಗಿದು ಕೊನೆಯ ಅವಕಾಶ ಟಿಕೆಟ್ ನೀಡಬೇಕು ಇಲ್ಲದಿದ್ದರೆ ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ.
ಇನ್ನು ರಾಯಚೂರು ಜಿಲ್ಲೆಯ ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೂ ಟಿಕೆಟ್ ಘೋಷಣೆಯಾಗಿಲ್ಲ. ರಾಯಚೂರಿನ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮಾನ್ವಿ ಒಂದಾಗಿದ್ದು ಇದು ಎಸ್‌ಟಿ ಮೀಸಲು ಕ್ಷೇತ್ರ ಕೂಡ. ಇಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ಗಂಗಾಧರ ನಾಯಕ ಹಾಗೂ ಮುಖಂಡ ಬಿ.ಮಾನಪ್ಪ ನಾಯಕ ಟಿಕೆಟ್ ನಿರೀಕ್ಷೆಯಲ್ಲಿದ್ದು, ದೇವದುರ್ಗ ಶಾಸಕ ಕೆ ಶಿವನಗೌಡ ನಾಯಕರ ಅಣತಿಯಂತೆ ಅಭ್ಯರ್ಥಿ ಘೋಷಣೆಯಾಗುವುದರಲ್ಲಿ ಅನುಮಾನವಿಲ್ಲ ಎನ್ನಲಾಗಿತ್ತು. ಆದರೆ, ಬಿಜೆಪಿ ಅಭ್ಯರ್ಥಿ ಘೋಷಿಸದೆ ಆಕಾಂಕ್ಷಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.