Monday, March 2, 2026
Homeಚುನಾವಣೆ 2023ಬಿಜೆಪಿ ಬಂಡಾಯದ ಬೆಂಕಿಯನ್ನು ಶಮನಗೊಳಿಸುವಂತೆ ಹೈ ಆದೇಶ

ಬಿಜೆಪಿ ಬಂಡಾಯದ ಬೆಂಕಿಯನ್ನು ಶಮನಗೊಳಿಸುವಂತೆ ಹೈ ಆದೇಶ

ಬೆಂಗಳೂರು: ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ತಳಮಳ ಪ್ರಾರಂಭವಾಗಿದೆ. ಹಲವು ಹಾಲಿ ಶಾಸಕರನ್ನು ಕೈಬಿಟ್ಟಿರುವುದು, ಸಾಕಷ್ಟು ಟಿಕೆಟ್ ಆಕಾಂಕ್ಷಿಗಳನ್ನು ಪಟ್ಟಿಯಿಂದ ಹೊರಗಿಟ್ಟಿರುವುದರಿಂದ ಬಿಜೆಪಿಗೆ ಬಂಡಾಯದ ಆತಂಕ ಕಾಡತೊಡಗಿದೆ. ಬಂಡಾಯವೆದ್ದಿರುವ ನಾಯಕರನ್ನು ಕರೆದು ಸಮಾಧಾನ ಮಾಡುವಂತೆ ರಾಜ್ಯ ನಾಯಕರಿಗೆ ಬಿಜೆಪಿ ಹೈಕಮ್ಯಾಂಡ್ ಸೂಚನೆ ನೀಡಿದೆ.
ಪಟ್ಟಿ ಬಿಡುಗಡೆಯಾಗುವ ಮುನ್ನವೇ ಟಿಕೆಟ್ ಕೈತಪ್ಪಿದ ಕಾರಣಕ್ಕೆ ಜಗದೀಶ್ ಶೆಟ್ಟರ್ ನೇರವಾಗಿ ಪಕ್ಷದ ವಿರುದ್ಧ ಸಿಡಿದು ನಿಂತಿದ್ದರು. ಪಟ್ಟಿ ಬಿಡುಗಡೆಯಾದ ಕೂಡಲೇ ಹಲವು ಮಂದಿ ನೇರವಾಗಿ ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು. ಅಥಣಿ ಟಿಕೆಟ್ ಆಕಾಂಕ್ಷಿ ಲಕ್ಷ್ಮಣ್ ಸವದಿ, ಜಯನಗರ ಟಿಕೆಟ್ ಆಕಾಂಕ್ಷಿ ಎನ್.ಆರ್.ರಮೇಶ್, ಸುಳ್ಯ ಶಾಸಕ ಅಂಗಾರ, ಉಡುಪಿ ಶಾಸಕ ರಘುಪತಿ ಭಟ್ ಮುಂತಾದವರು ಟಿಕೆಟ್ ಕೈ ತಪ್ಪಿದ್ದಕ್ಕೆ ಖೇದ ವ್ಯಕ್ತಪಡಿಸಿದ್ದರು.
ಇದೇ ವೇಳೆ ಬಿಜೆಪಿ ಟಿಕೆಟ್ ವಂಚಿತ ಅಭ್ಯರ್ಥಿಗಳು ಪಕ್ಷವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಆತಂಕ ಬಿಜೆಪಿಗೆ ಎದುರಾಗಿದೆ. ರಾಜ್ಯನಾಯಕರಿಗೆ ಸೂಚನೆ ನೀಡಿರುವ ಹೈಕಮ್ಯಾಂಡ್ ಬಂಡಾಯವೆದ್ದವರನ್ನು ಕರೆದು ಮಾತಾಡಿಸಿ. ನಿಮಗೆ ಟಿಕೆಟ್ ಕೈತಪ್ಪಲು ಕಾರಣವೇನೆಂದು ವಿವರಿಸಿ ಎಂದು ಆದೇಶಿಸಿದ್ದಾರೆ. ಚುನಾವಣೆಗೆ ದಿನಗಣನೆ ನಡೆದಿರುವ ಸಮಯದಯಲ್ಲಿ ಹಿರಿಯ ನಾಯಕರು ಪಕ್ಷದ ವಿರುದ್ಧ ಬಂಡೆದ್ದರೆ ಪಕ್ಷದ ಮತಗಳಿಕೆಯ ಮೇಲೆ ಪರಿಣಾಮ ಬೀರಬಹುದೆಂಬ ಆತಂಕ ಬಿಜೆಪಿ ನಾಯಕರಲ್ಲಿ ಮನೆ ಮಾಡಿದೆ.

ಹೆಚ್ಚಿನ ಸುದ್ದಿ