ಬೀದರ್: ರಾಜ್ಯದಲ್ಲಿ ಲಿಂಗಾಯತರ ಮನವೊಲಿಕೆ ಕೆಲಸದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪೈಪೋಟಿಗೆ ಬಿದ್ದಂತೆ ಕಾಣ್ತಿದೆ. ಶೆಟ್ಟರ್ ಬಿಜೆಪಿಯಿಂದ ಹೊರಬಿದ್ದ ಬೆನ್ನಲ್ಲೇ ಲಿಂಗಾಯತರಿಗೆ ಬಿಜೆಪಿ ಮೋಸ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿಯೂ ಕಾಂಗ್ರೆಸ್ ಮೇಲೆ ಟೀಕೆಗಳ ಸುರಿಮಳೆಯನ್ನೇ ಸುರಿಸಿದೆ.
ಐವತ್ತು ವರ್ಷಗಳಿಂದ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡದ ಮತ್ತು ಲಿಂಗಾಯತ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದ ಕಾಂಗ್ರೆಸ್ ಈಗ ಮೊಸಳೆ ಕಣ್ಣಿರು ಹಾಕುತ್ತಿದೆ. ಬಿಜೆಪಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಕಾಂಗ್ರೆಸ್ಸಿಗರಿಗೆ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬೀದರ್‌ನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಬಿಜೆಪಿ ಲಿಂಗಾಯತರಿಗೆ ಅತಿ ಹೆಚ್ಚು ಸೀಟ್ ಗಳನ್ನು ನೀಡಿದೆ. ಕಾಂಗ್ರೆಸ್ ನಲ್ಲಿ ನಿಜಲಿಂಗಪ್ಪ ಅವರ ನಂತರ 50 ವರ್ಷದಿಂದ ಲಿಂಗಾಯತರು ಸಿಎಂ ಆಗಲಿಲ್ಲ. ವಿರೇಂದ್ರ ಪಾಟೀಲ ಅವರನ್ನು 9 ತಿಂಗಳಲ್ಲೇ ಹೀನಾಯವಾಗಿ ಅಧಿಕಾರದಿಂದ ಕೆಳಗಿಳಿಸಲಾಗಿದ್ದು, ಎಲ್ಲವೂ ಜನರ ಮನಸ್ಸಿನಲ್ಲಿದೆ ಎಂದರು. ಇದಕ್ಕೆಲ್ಲಾ ಜನರೇ ಚುನಾವಣೆ ಮುಖಾಂತರ ಉತ್ತರಿಸುತ್ತಾರೆ ಎಂದ್ರು.