Monday, July 7, 2025
Homeಟಾಪ್ ನ್ಯೂಸ್ಸ್ಯಾಕ್ರಮೆಂಟೋ ಗುರುದ್ವಾರದ ಬಳಿ ಗುಂಡಿನ ದಾಳಿ : ಇಬ್ಬರ ಸ್ಥಿತಿ ಚಿಂತಾಜನಕ

ಸ್ಯಾಕ್ರಮೆಂಟೋ ಗುರುದ್ವಾರದ ಬಳಿ ಗುಂಡಿನ ದಾಳಿ : ಇಬ್ಬರ ಸ್ಥಿತಿ ಚಿಂತಾಜನಕ

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸ್ಯಾಕ್ರಮೆಂಟೊ ಕೌಂಟಿಯ ಗುರುದ್ವಾರದ ದೇವಾಲಯದ ಬಳಿ ಗುಂಡಿನ ದಾಳಿ ನಡೆದಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಮಧ್ಯಾಹ್ನ ಸುಮಾರು 2.30ಕ್ಕೆ ಈ ಘಟನೆ ನಡೆದಿದ್ದು, ಈ ದಾಳಿಯು ಯಾವುದೇ ದ್ವೇಷದ ಹಿನ್ನೆಲೆ ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಕೌಂಟಿಯ ಗುರುದ್ವಾರದಲ್ಲಿ ಇಬ್ಬರು ಗುಂಡು ಹಾರಿಸಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಗುಂಡಿನ ದಾಳಿಯು ದ್ವೇಷದ ಪ್ರಕರಣಕ್ಕೆ ಸಂಬಂಧಿಸಿಲ್ಲ, ಇದು ಒಬ್ಬರಿಗೊಬ್ಬರು ತಿಳಿದಿರುವ ಇಬ್ಬರು ಪುರುಷರ ನಡುವಿನ ಗುಂಡಿನ ಚಕಮಕಿಯಾಗಿದೆ ಎಂದು ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿಯು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದೆ.

ಮೊದಲು ಇಬ್ಬರ ವ್ಯಕ್ತಿಗಳ ನಡುವೆ ಕಾದಾಟ ಶುರುವಾಗಿದೆ. ಬಳಿಕ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಸ್ನೇಹಿತನಿಗೆ ಗುಂಡು ಹಾರಿಸಿದ. ನಂತರ ಮತ್ತೊಬ್ಬ ವ್ಯಕ್ತಿ ಆ ವ್ಯಕ್ತಿಗೆ ಗುಂಡು ಹಾರಿಸುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದ್ದಾರೆ, ನಂತರ ಸ್ಥಳದಿಂದ ಓಡಿಹೋಗಿದ್ದಾರೆ ಎಂದು ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿಯ ವಕ್ತಾರ ಅಮರ್ ಗಾಂಧಿ ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಘಟನೆಗೆ ಕಾರಣವೇನು ಎಂಬುದನ್ನು ನಿರ್ಧರಿಸಲು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಹೆಚ್ಚಿನ ಸುದ್ದಿ