ವಿಜಯವಾಡ: ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್ ಕಾಂಗ್ರೆಸ್ ನಾಯಕ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್‌ವೊಂದನ್ನ ನಾಯಿ ಹರಿದು ಹಾಕಿದ್ದಕ್ಕೆ ನಾಯಿ ಮೇಲೆ ಕೇಸ್ ದಾಖಲಿಸಲಾಗಿದೆ. ಮನೆಯೊಂದರ ಗೋಡೆ ಮೇಲೆ ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್ ಹಾಕಲಾಗಿದ್ದು, ಅದರ ಮೇಲೆ “ಜಗನಣ್ಣ ಮಾ ಭವಿಷ್ಯತ್ತು” ಎಂದರೆ ಜಗನ್ ಅಣ್ಣನೇ ನಮ್ಮ ಭವಿಷ್ಯ ಎಂದು ಬರೆಯಲಾಗಿದೆ. ನಾಯಿ ಪೋಸ್ಟರ್ ಹರಿದು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ
ಇದಕ್ಕೆ ಸಂಬಂಧಪಟ್ಟಂತೆ ದಾಸರಿ ಉದಯಶ್ರೀ ಎನ್ನುವ ಮಹಿಳೆಯೊಂದಿಗೆ ಕೆಲವು ಸ್ಥಳೀಯ ಮಹಿಳೆಯರು ಸೇರಿ ವಿಜಯವಾಡ ಪೊಲೀಸ್ ಠಾಣೆಯಲ್ಲಿ ನಾಯಿ ವಿರುದ್ಧ ದೂರನ್ನ ದಾಖಲಿಸಿದ್ದಾರೆ.. ಅಲ್ಲದೇ ದಾಸರಿ ಉದಯಶ್ರೀ ಅವರು ತೆಲುಗು ದೇಸಂ ಪಾರ್ಟಿಯ ಕರ್ಯಕರ್ತೆ ಎಂದು ತಿಳಿದುಬಂದಿದೆ.
ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದಾಸರಿ ಉದಯಶ್ರೀ “ನಮ್ಮ ಪ್ರೀತಿಯ ಸಿಎಂಗೆ ಅವಮಾನ ಮಾಡಿದ ಶ್ವಾನ ಮತ್ತು ಆ ನಾಯಿಯ ಹಿಂದಿರುವವರನ್ನು ಬಂಧಿಸಬೇಕು ಎಂದು ನಾವು ಪೊಲೀಸರಿಗೆ ಮನವಿ ಮಾಡಿದ್ದೇವೆ” ಎಂದು ತಿಳಿಸಿದ್ದಾರೆ. ಇದು ತೆಲುಗುದೇಶಂ ಪಾರ್ಟಿ ಕಾರ್ಯಕರ್ತೆಯರು ನಿಜವಾದ ಅಭಿಮಾನದಿಂದ ಕೇಸ್ ದಾಖಲಿಸಿದ್ರೋ ಅಥವಾ ಜಗನ್ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.