ಲಕ್ನೋ: ಇಲಿಯ ಬಾಲಕ್ಕೆ ಕಲ್ಲು ಕಟ್ಟಿ ಚರಂಡಿಯಲ್ಲಿ ಮುಳುಗಿಸಿದ ವ್ಯಕ್ತಿಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು 30 ಪುಟಗಳ ಚಾರ್ಜ್‌ಶೀಟನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ವಿಧಿವಿಜ್ಞಾನ ವರದಿ, ಮಾಧ್ಯಮಗಳಲ್ಲಿನ ವೀಡಿಯೊಗಳು ಮತ್ತು ವಿವಿಧ ಇಲಾಖೆಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಆರೋಪಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧಾರವಾಗಿ ಬಳಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನವೆಂಬರ್ 25 ರಂದು ಮನೋಜ್ ಕುಮಾರ್ ಎಂಬಾತನ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಮನೋಜ್ ಕುಮಾರ್ ಇಲಿಯ ಬಾಲಕ್ಕೆ ಕಲ್ಲನ್ನು ಕಟ್ಟಿ ಅದನ್ನು ಚರಂಡಿಗೆ ಎಸೆದಿದ್ದ ಎಂದು ಸಾಮಾಜಿಕ ಕಾರ್ಯಕರ್ತ ವಿಕೇಂದ್ರ ಶರ್ಮಾ ದೂರು ನೀಡಿದ್ದರು.
ಶ್ವಾಸಕೋಶದ ಸೋಂಕಿನಿಂದ ಉಂಟಾದ ಉಸಿರುಕಟ್ಟುವಿಕೆಯಿಂದಾಗಿ ಇಲಿ ಸಾವನ್ನಪ್ಪಿದೆ ಎಂದು ಮರಣೋತ್ತರ ವರದಿ ತಿಳಿಸಿದೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ₹ 10 ರಿಂದ ₹ 2,000 ವರೆಗೆ ದಂಡ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆಗೆ ಅವಕಾಶವಿದೆ. ಮತ್ತು ಐಪಿಸಿ ಸೆಕ್ಷನ್ 429 ರ ಅಡಿಯಲ್ಲಿ, ಐದು ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.
