ಗದಗದ ಲಕ್ಷ್ಮೇಶ್ವರ ತಾಲೂಕಿನ ಆದ್ರಳ್ಳಿಯ ಲಂಬಾಣಿ ಸಮುದಾಯದ ಶ್ರೀ ಕುಮಾರ ಮಹಾರಾಜ ಸ್ವಾಮೀಜಿ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘಣೆ ಆರೋಪ ಕೇಳಿಬಂದಿದೆ.
ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಒಳ ಮೀಸಲಾತಿಯಿಂದ ಸಮಾಜಕ್ಕೆ ಅನ್ಯಾಯವಾಗಿದೆ, ಹಾಗಾಗಿ, ಮುಂದಿನ ಚುನಾವಣೆಯಲ್ಲಿ ಲಂಬಾಣಿ ಸಮಾಜ ಬಿಜೆಪಿಗೆ ಮತ ಹಾಕಬಾರದು ಎಂದು ಸ್ವಾಮೀಜಿ ಬಹಿರಂಗ ಸಭೆಯಲ್ಲಿ ಪ್ರಮಾಣ ಮಾಡಿಸಿದ್ದಾರೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರಕರಣ ದಾಖಲಿಸಲಾಗಿದೆ.
ಒಳಮೀಸಲಾತಿ ಆದೇಶ ವಿರೋಧಿಸಿ ಶಿರಹಟ್ಟಿ ಮತಕ್ಷೇತ್ರದ ಲಂಬಾಣಿ, ಕೊರಚ, ಕೊರಮ, ಜತೆಗೆ ಮುಸ್ಲಿಂ ಜನಾಂಗದವರನ್ನು ಒಳಗೊಂಡು ಲಕ್ಷ್ಮೇಶ್ವರದಲ್ಲಿ ನಡೆಸಿದ ಪ್ರತಿಭಟನೆ ವೇಳೆ ಸ್ವಾಮೀಜಿ ಈ ರೀತಿ ಪ್ರಮಾಣ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಮಾರುತಿ ರಾಠೋಡ್ ಅವರು, ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, 0048/2023-ಕಲಂ-295, 171-ಸಿ, ಐಪಿಸಿ ಮತ್ತು ಜನ ಪ್ರಾತಿನಿಧ್ಯ ಕಾಯ್ದೆ-1951 u/s-125(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
