ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಅಂಜನ ಮೂರ್ತಿ ಗುರುವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಉಸಿರಾಟದ ತೊಂದರೆಯ ಕಾರಣದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಿಂದ ಮೂರು ಬಾರಿ ಶಾಸಕರಾಗಿದ್ದ ಅಂಜನಮೂರ್ತಿ, ಕಾಂಗ್ರೆಸ್ ಆಡಳಿತಾವಧಿಯಲ್ಲಿ 2005-06 ರಲ್ಲಿ ವಸತಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 1993 ರಲ್ಲಿ ಕರ್ನಾಟಕ ವಿಧಾನಸಭೆಯ ಉಪಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು.
ಇಷ್ಟೇ ಅಲ್ಲದೆ ತಾಲೂಕು ಯುವ ಕಾಂಗ್ರೆಸ ಪ್ರಧಾನ ಕಾರ್ಯದರ್ಶಿ, ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯ, ಲ್ಯಾಂಡ್ ಟ್ರಿಬ್ಯೂನಲ್ ಸದಸ್ಯ, ಗ್ರಾಮಾಂತರ ಜಿಲ್ಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ವಕೀಲರ ಸಂಘದ ಅಧ್ಯಕ್ಷರಾಗಿಯೂ ಅವರು ಸೇವೆಸಲ್ಲಿಸಿದ್ದರು.
ಇವರ ಬಹುಮುಖಿ ವ್ಯಕ್ತಿತ್ವ ಹಾಗೂ ಸಮಾಜಸೇವೆಗಾಗಿ ಹಲವು ಪ್ರಶಸ್ತಿ ಬಹುಮತಿಗಳು ಅರಸಿ ಬಂದಿತ್ತು. ಅಂಜನ ಮೂರ್ತಿ ಅಗಲಿಕೆಗೆ ಕಾಂಗ್ರೆಸ್ ನಾಯಕರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
