ಬೆಂಗಳೂರು: ಕಾಂಗ್ರೆಸ್ ನ ನಾಲ್ಕನೇ ಪಟ್ಟಿ ಮಂಗಳವಾರ ಬಿಡುಗಡೆಯಾಗಿದ್ದು, ಒಟ್ಟು 7 ಕ್ಷೇತ್ರದ ಟಿಕೆಟ್ ಘೋಷಣೆ ಮಾಡಲಾಗಿದೆ.
ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿ ಒಟ್ಟು 7 ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಪುಲಕೇಶಿ ನಗರ, ಸಿವಿ ರಾಮನ್ ನಗರ, ಮುಳಬಾಗಿಲು, ರಾಯಚೂರು ನಗರ, ಅರಕಲಗೂಡು, ಮಂಗಳೂರು ಉತ್ತರ, ಶಿಡ್ಲಘಟ್ಟ, ಕೆ ಆರ್ ಪುರಂ ಒಟ್ಟು 8 ಕ್ಷೇತ್ರಗಳ ಪಟ್ಟಿಯನ್ನು ಬಾಕಿ ಉಳಿಸಿಕೊಂಡಿದೆ.
ಒಟ್ಟು 15 ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಬಾಕಿ ಉಳಿಸಿಕೊಂಡಿದ್ದ ಕಾಂಗ್ರೆಸ್, ಅಳೆದು ತೂಗಿ 7 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮೊದಲೇ ನಿರ್ಧರಿಸಿದಂತೆ ಹುಬ್ಬಳ್ಳಿ -ಧಾರವಾಡ ಕೇಂದ್ರಕ್ಕೆ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇನ್ನುಳಿದ ೮ ಕ್ಷೇತ್ರಗಳಿಗೆ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಕಾದುನೋಡಬೇಕಿದೆ.
ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ಅಂದೇ ಫಲಿತಾಂಶ ಪ್ರಕಟವಾಗಲಿದೆ.
