ಮಂಡ್ಯ: ಇತ್ತೀಚೆಗಷ್ಟೇ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಸುಮಲತಾ ಅಂಬರೀಶ್ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಂದು ಮಂಡ್ಯದ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ವರಿಷ್ಠರು ಸೂಚಿಸಿದರೆ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ಮಂಡ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡುವ ಬಗ್ಗೆ ಮಾತುಗಳು ಇವೆ. ಪಕ್ಷ ಸೂಚನೆ ನೀಡಿದರೆ ನನ್ನ ಸ್ಪರ್ಧೆ ಇರಲಿದೆ. ಈವರೆಗೆ ಪಕ್ಷ ನನಗೆ ಯಾವುದೇ ಸೂಚನೆಯನ್ನು ನೀಡಿಲ್ಲ. ಮಂಡ್ಯ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಮರ್ಥರಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಮಂಡ್ಯ ಜಿಲ್ಲೆಯ ಜನ ಬದಲಾವಣೆ ಬಯಸುತ್ತಿದ್ದಾರೆ. ಹೀಗಾಗಿ ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಅಚ್ಚರಿ ಫಲಿತಾಂಶ ಬರುತ್ತದೆ. ಮದ್ದೂರಿನಲ್ಲಿಅಂಬರೀಶ್ ಅಭಿಮಾನಿಗಳು ಹೆಚ್ಚು ಇದ್ದಾರೆ. ಅಂಬರೀಶ್ ಅಭಿಮಾನಿಗಳಿರುವುದರಿಂದ ಬಿಜೆಪಿಗೆ ಪ್ಲಸ್ ಆಗುತ್ತೆ. ಮುಂದಿನ ದಿನಗಳಲ್ಲಿ ಬಿಜೆಪಿ ಪರ ಅಭಿಷೇಕ್ ಪ್ರಚಾರ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಸುಮಲತಾ ಅಪ್ರಬುದ್ಧ ರಾಜಕಾರಣಿ ಎಂಬ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದೆ, ಅಪ್ರಬುದ್ಧ ರಾಜಕಾರಣಿ ಯಾರು ಎನ್ನುವುದನ್ನು ಜನ ತೋರಿಸುತ್ತಾರೆ. 5 ವರ್ಷದಲ್ಲಿ ಅವರ ಸಾಧನೆ ಏನು ಎಂದು ಜನರಿಗೆ ಗೊತ್ತಿಲ್ಲ. ಚುನಾವಣೆಯಲ್ಲಿ ರವೀಂದ್ರ ಶ್ರೀಕಂಠಯ್ಯಗೆ ಜನ ಪಾಠ ಕಲಿಸುತ್ತಾರೆ ಎಂದು ತಿರುಗೇಟು ನೀಡಿದರು.