ಬೆಂಗಳೂರು: ದೇಶದಲ್ಲಿ ಮತ್ತೆ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 10,753 ಹೊಸ ಪಾಸಿಟಿವ್ ಪ್ರಕರಣಗಳು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಮಾಹಿತಿ ನೀಡಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ 10,753 ಜನರಿಗೆ ಸೋಂಕು ಪತ್ತೆಯಾಗಿದ್ದು, ದಿನನಿತ್ಯದ ಪಾಸಿಟಿವ್ ದರ ಶೇ.6.78ಕ್ಕೆ ತಲುಪಿದೆ. ಒಂದು ವಾರದ ಪಾಸಿಟಿವ್ ದರ ಶೇ.4.49ಕ್ಕೆ ತಲುಪಿದೆ. ಈ ನೂತನ ಪಾಸಿಟಿವ್ ಪ್ರಕರಣಗಳಿಂದಾಗಿ ದೇಶದಲ್ಲಿನ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 53,720ಕ್ಕೆ ಏರಿದೆ ಎಂದು ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 6,628 ಜನ ಕೊರೊನಾ ಸೋಂಕಿತರು ಗುಣ ಮುಖರಾಗಿದ್ದು, ದೇಶದಲ್ಲಿ ಈವರೆಗೆ ಒಟ್ಟು 4,42,23,221 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು ಕಳೆದ 24 ಗಂಟೆಗಳಲ್ಲಿ 1,58,625 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, 10,753 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು ಈವರೆಗೆ ದೇಶದಲ್ಲಿ 92.38ಕ್ಕೂ ಹೆಚ್ಚು ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 418 ಹೊಸ ಕೊರೋನಾ ಪ್ರಕರಣಗಳೂ ಪತ್ತೆಯಾಗಿವೆ. ಈ ನೂತನ ಪಾಸಿಟಿವ್ ಪ್ರಕರಣಗಳ ಮೂಲಕ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1772ಕ್ಕೆ ಏರಿಕೆ ಆಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 40,81,445 ಕೊರೋನಾ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾದಿಂದಾಗಿ ಮೃತಪಟ್ಟ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಈವರೆಗೆ ಒಟ್ಟು 40,291 ಕೊರೋನಾ ಸೋಂಕಿತರು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಇನ್ನು ರಾಜ್ಯದದಲ್ಲಿ ಒಂದೇ ದಿನ 360 ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಒಟ್ಟು 40,81,445 ಕೊರೊನಾ ಪ್ರಕರಣಗಳಲ್ಲಿ 40,39,350 ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.