ನವದೆಹಲಿ: ದೆಹಲಿಯ ಮೋಸ್ಟ್ ವಾಂಟೆಡ್ ದರೋಡೆಕೋರ ದೀಪಕ್ ಬಾಕ್ಸರ್ ನನ್ನು ಅಮೆರಿಕದ ಎಫ್ ಬಿಐ ಸಹಾಯದೊಂದಿಗೆ ದಿಲ್ಲಿ ಪೊಲೀಸರು ಮೆಕ್ಸಿಕೋದಲ್ಲಿ ಬಂಧಿಸಿದ್ದಾರೆ. ಈತನ ಬಂಧನಕ್ಕೆ 3 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ಇದೀಗ ಈತನನ್ನು ಬಂಧಿಸಲಾಗಿದೆ. ಈ ವರ್ಷದ ಜನವರಿಯಲ್ಲಿ ದೀಪಕ್ ಬಾಕ್ಸರ್ ನಕಲಿ ಪಾಸ್‌ಪೋರ್ಟ್ ಬಳಸಿ ದುಬೈಗೆ ಪರಾರಿಯಾಗಿದ್ದ. ಅಲ್ಲಿಂದ ವಿವಿಧ ದೇಶಗಳಿಗೆ ಪ್ರಯಾಣಿಸಿ ಮೆಕ್ಸಿಕೋ ತಲುಪಿದ್ದ.
ದೆಹಲಿ ಪೊಲೀಸ್ ಇಲಾಖೆಯ ಇಬ್ಬರು ಅಧಿಕಾರಿಗಳು ಮೆಕ್ಸಿಕೋಗೆ ತೆರಳಿದರು. ಮೆಕ್ಸಿಕೋ ಪೊಲೀಸರು ಮತ್ತು ಎಫ್‌ಬಿಐ ಸಹಾಯದಿಂದ ದೀಪಕ್ ಬಾಕ್ಸರ್‌ನನ್ನು ಬಂಧಿಸಲಾಯಿತು.
ಇದೀಗ ದೀಪಕ್ ನನ್ನು ಪಟಿಯಾಲ ಹೌಸ್ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ದೀಪಕ್ ಬಾಕ್ಸರ್‌ನ ಕ್ರಿಮಿನಲ್ ಹಿನ್ನೆಲೆಯಲ್ಲಿ ಗಮನಿಸುವುದಾದರೆ ಈತ ಹಲವು ಕೊಲೆ, ಸುಲಿಗೆ ಮತ್ತು ಇತರ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದ.