Monday, October 13, 2025
Homeಚುನಾವಣೆ 2023ಮತದಾರರ ಹೆಸರುಗಳ ಅಕ್ರಮ ಸೇರ್ಪಡೆ ನಡೆಯುತ್ತಿದೆ - ಡಿಕೆಶಿ ಗಂಭೀರ ಆರೋಪ

ಮತದಾರರ ಹೆಸರುಗಳ ಅಕ್ರಮ ಸೇರ್ಪಡೆ ನಡೆಯುತ್ತಿದೆ – ಡಿಕೆಶಿ ಗಂಭೀರ ಆರೋಪ

ಬೆಂಗಳೂರು: ಮಹದೇವಪುರ ಕ್ಷೇತ್ರದಲ್ಲಿ 42 ಸಾವಿರಕ್ಕೂ ಹೆಚ್ಚು ಮಂದಿಯನ್ನು ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿಸಲಾಗಿದ್ದು, ಚುನಾವಣಾ ಆಯೋಗದ ಕಣ್ತಪ್ಪಿಸಿ ಬಿಜೆಪಿ ಈ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಕುರಿತು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದು ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ದಾಖಲೆ ಮತ್ತು ಮಾಹಿತಿಗಳನ್ನು ಹೊಂದಿದ್ದೇವೆ ಎಂದು ನುಡಿದ ಡಿ.ಕೆ.ಶಿವಕುಮಾರ್, ಒಂದೇ ಮತವನ್ನು ಎರಡು ಮೂರು ಕಡೆ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೆಸರು, ತಂದೆಯ ಹೆಸರು ಎಲ್ಲವೂ ಒಂದೇ ಆಗಿದ್ದು ಮತದಾರರ ಚೀಟಿಯಲ್ಲಿರುವ ಫೋಟೋ ಮಾತ್ರ ಬೇರೆಬೇರೆಯಾಗಿದೆ. ಈ ರೀತಿ 42,222 ಮಂದಿಯನ್ನು ಅಕ್ರಮವಾಗಿ ಸೇರಿಸಲಾಗಿದ್ದು, ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ನಡೆಸಿದಾಗ ಈ ಅಕ್ರಮವನ್ನು ಮಾಡಲಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ತನಿಖೆ ನಡೆಸಬೇಕು. ಇದಕ್ಕಾಗಿ ಪ್ರತ್ಯೇಕ ತಂಡವನ್ನು ಪರಿಶೀಲನೆಗೆ ಕಳುಹಿಸಬೇಕು. ಚುನಾವಣಾ ಆಯೋಗ ತನ್ನ ಘನತೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಹೆಚ್ಚಿನ ಸುದ್ದಿ