ಮೇ 10ರಂದು ರಾಜ್ಯದಲ್ಲಿ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿಹಿಡಿಯಲು ವಿಪಕ್ಷಗಳ ಅಭ್ಯರ್ಥಿಗಳುಭರದ ಪ್ರಚಾರ ನಡೆಸುತ್ತುದ್ದರೆ ಇನ್ನೊಂದೆಡೆ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ನಾಡಿನಾದ್ಯಂತ ಜನರ ಸಹಭಾಗಿತ್ವವನ್ನು ಖಾತ್ರಿಪಡಿಸಲು ಹಾಗೂ ಜನರಲ್ಲಿ ಮತದಾನದ ಅರಿವನ್ನು ಮೂಡಿಸಲು ಕರ್ನಾಟಕದ ಮುಖ್ಯಚುನಾವಣಾಧಿಕಾರಿಗಳು ವಿನೂತನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಪ್ರತಿಭಾವಂತ ತೃತೀಯ ಲಿಂಗಿ ಕಲಾವಿದರ ಅರವಾಣಿ ಆರ್ಟ್ ಪ್ರಾಜೆಕ್ಟ್ ತಂಡವು ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ 3 ಮಹಡಿಯ ನೂತನ ಕಟ್ಟಡದ ಗೋಡೆಗಳ ಮೇಲೆ ಕಣ್ಮನ ಸೆಳೆಯುವ ಬಣ್ಣದ ಚಿತ್ತಾರವನ್ನು ಮೂಡಿಸಿದೆ. ಮತದಾನದ ಮಹತ್ವ , ಯುವಕರ, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲರ ಸಹಭಾಗಿತ್ವವನ್ನು ಸಾರುವ ವೈಶಿಷ್ಟ್ಯಪೂರ್ಣ ವರ್ಣಚಿತ್ರಗಳನ್ನು ಚಿತ್ತಾಕರ್ಷಕವಾಗಿ ಮೂಡಿಸಿದ್ದು ತೃತೀಯ ಲಿಂಗಿ ಕಲಾವಿದರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.

ತೃತೀಯ ಲಿಂಗಿಗಳು ಅಥವಾ ಲಿಂಗ ಅಲ್ಪಸಂಖ್ಯಾತರು ಸಾರ್ವಜನಿಕವಾಗಿ ಗುರುತಿಸಿಕೊಳ್ಳುವುದಕ್ಕೆ ಹಿಂಜರಿಯುವ ಪರಿಸ್ಥಿತಿಯನ್ನು ಸುಧಾರಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಪರೋಕ್ಷವಾಗಿ ಮಾಡುತ್ತಿದೆ.

ರಾಜಧಾನಿ ಬೆಂಗಳೂರು ಅತೀ ಹೆಚ್ಚು ಜನ ಸಂಖ್ಯೆ ಹೊಂದಿದ್ದರೂ ಚುನಾವಣೆ ಸಂದರ್ಭದಲ್ಲಿ, ಬೆಂಗಳೂರು ನಗರದಲ್ಲಿ ಕಡಿಮೆ ಮತದಾನದ ಪ್ರಮಾಣ ದಾಖಲಾಗುತ್ತಿರುವುದು ಕಳವಳಕಾರಿ ಸಂಗತಿ ಹೀಗಾಗಿ ಬೆಂಗಳೂರು ಮಹಾನಗರದ ಜನತೆಯನ್ನು ಮತಗಟ್ಟೆಯತ್ತ ಸೆಳೆಯಲು ಮುಖ್ಯ ಚುನಾವಣಾಧಿಕಾರಿಗಳು ಮಾಡಿರುವ ಮತ್ತೊಂದು ವಿಶಿಷ್ಟ ಪ್ರಯತ್ನವೇ ಪ್ರತಿಭಾವಂತ ತೃತೀಯ ಲಿಂಗಿ ಕಲಾವಿದರ ತಂಡದ ಅರವಾಣಿ ಆರ್ಟ್ ಪ್ರಾಜೆಕ್ಟ್. ಗೋಡೆಗಳ ಮೇಲೆ ಚುನಾವಣಾ ಜಾಗೃತಿಯ ಚಿತ್ತಾರದ ಮೂಲಕ ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
