ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಮ್ಮ ಆಸ್ತಿಪಾಸ್ತಿಗಳನ್ನು ಅಫಿಡವಿಟ್ ಮೂಲಕ ಸಲ್ಲಿಸಿದ್ದಾರೆ. ಎಲ್ಲೆಡೆ ಅಭ್ಯರ್ಥಿಗಳು ಕೋಟಿ ಕೋಟಿ ಆಸ್ತಿಯ ವಿವರ ನೀಡಿದ್ರೆ, ಇಲ್ಲಿ ಮುತಾಲಿಕ್ ನೀಡಿರೋ ಆಸ್ತಿವಿವರಗಳೇ ಡಿಫರೆಂಟ್.
ಪ್ರಮೋದ್ ಮುತಾಲಿಕ್ ಕೈಯಲ್ಲಿ ಸದ್ಯ 13,500 ರೂ. ನಗದು ಮಾತ್ರ ಇದೆ. ಆದರೆ ಏಳು ಠಾಣೆಗಳಲ್ಲಿ ಸುಮಾರು 28 ಸಾರ್ವಜನಿಕ ಧಕ್ಕೆ ತಂದ ಪ್ರಕರಣಗಳಿವೆ. ಅವರ ಒಟ್ಟು ಆಸ್ತಿ ಮೌಲ್ಯ 2.63 ಲಕ್ಷ ರೂ. ಗಳಾಗಿವೆ.
ಇದನ್ನು ಬಿಟ್ಟರೆ ಬೇರೆ ಯಾವುದೇ ಚರಾಸ್ತಿ ಅಥವಾ ಸ್ಥಿರಾಸ್ತಿ, ಸ್ವಂತ ವಾಹನ ಅಥವಾ ಸಾಲ ಇಲ್ಲವೆಂದು ಘೋಷಣೆ ಮಾಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೋಮು ಗಲಭೆ, ಜೀವ ಬೆದರಿಕೆ, ಪ್ರಚೋದನಕಾರಿ ಹೇಳಿಕೆ, ಮತೀಯ ಭಾವನೆಗೆ ಧಕ್ಕೆ, ಅವಹೇಳನ, ಆದೇಶ ಉಲ್ಲಂಘನೆ, ಧಾರ್ಮಿಕ ಭಾವನೆಗೆ ಧಕ್ಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆಯ ಪ್ರಕರಣಗಳು ಮುತಾಲಿಕ್ ಮೇಲಿವೆ.
ಪ್ರಮೋದ್ ಮುತಾಲಿಕ್ ಅವರಿಗೆ ಪತ್ನಿ, ಕುಟುಂಬ ಇಲ್ಲ. ಯಾರೂ ಅವಲಂಬಿತರೂ ಇಲ್ಲ. ಉಳಿದಂತೆ ಅವರ ಹೆಸರಲ್ಲಿ ಯಾವುದೇ ಜಮೀನು, ನಿವೇಶನ, ಮನೆ, ವಾಹನ, ಚಿನ್ನಭರಣ, ಸಾಲ, ದುಬಾರಿ ವಸ್ತುಗಳು ಇಲ್ಲ. ಆದಾಯ ಮೂಲವನ್ನು ದೇಣಿಗೆ ಸಂಗ್ರಹ, ಉದ್ಯೋಗ ಸಮಾಜಸೇವೆ ಎಂದು ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.