Monday, March 2, 2026
Homeಚುನಾವಣೆ 2023ಇದು ನನ್ನ ರಾಜಕೀಯ ಜೀವನದಲ್ಲೇ ಕೆಟ್ಟ ದಿನಗಳು: ಶೆಟ್ಟರ್ ನೋವಿನ ನುಡಿ

ಇದು ನನ್ನ ರಾಜಕೀಯ ಜೀವನದಲ್ಲೇ ಕೆಟ್ಟ ದಿನಗಳು: ಶೆಟ್ಟರ್ ನೋವಿನ ನುಡಿ

ಹುಬ್ಬಳ್ಳಿ: ಇದು ನನ್ನ 40 ವರ್ಷದ ರಾಜಕಾರಣದಲ್ಲೇ ಕೆಟ್ಟ ದಿನಗಳು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ನೋವಿನ ಮಾತುಗಳನ್ನಾಡಿದ್ದಾರೆ.

ಟಿಕೆಟ್‌ ನೀಡದಿದ್ದಕ್ಕೆ ಕಾರಣ ಕೇಳಿ ಹೈಕಮಾಂಡ್‌ಗೆ 2 ದಿನ ಗಡುವು ನೀಡಿದ್ದ ಶೆಟ್ಟರ್, ಪಕ್ಷೇತ್ರರಾಗಿ ಕಣಕ್ಕಿಳಿಯೋ ಮಾತಾಡಿದ್ದರು. ಇಂದು ಶೆಟ್ಟರ್ ನಿವಾಸಕ್ಕೆ ಕೇಂದ್ರ ನಾಯಕರಾದ ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಷಿ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸಿ ಶೆಟ್ಟರ್ ಮನವೊಲಿಸುವ ಪ್ರಯತ್ನ ಮಾಡಿ ವಿಫಲರಾಗಿ ವಾಪಸ್ ತೆರಳಿದ್ರು.

ಪಕ್ಷವನ್ನು ಕೆಳಮಟ್ಟದಿಂದ ನಾನು ಕಟ್ಟಿದ್ದೇನೆ. ನಾವು ಬಿಜೆಪಿ ಪಕ್ಷವನ್ನು ಕಟ್ಟಲು ಪಟ್ಟ ಕಷ್ಟ ನನಗೆ ನೆನಪಿದೆ. ಬಿಜೆಪಿಗೆ ಹುಡುಕಿ ಕ್ಯಾಂಡಿಡೇಟ್‌ ಹಾಕಿದ್ದ ದಿನಗಳು ನೆನಪಿದೆ. ಆದರೆ ಅದಾವುದಕ್ಕೂ ಇಂದು ಬೆಲೆ ಇಲ್ಲ ಎಂದು ಜಗದೀಶ್‌ ಶೆಟ್ಟರ್ ಬೇಸರದ ಮಾತಾಡಿದ್ರು

ಸಂಧಾನ ಸಭೆಯ ನಂತರ ಮಾತನಾಡಿದ ಶೆಟ್ಟರ್, ನಾನು ಯಾವುದೇ ಕಪ್ಪುಚುಕ್ಕಿ ಇಲ್ಲದೇ ರಾಜಕಾರಣ ಮಾಡಿದ್ದೇನೆ. ಬಿಜೆಪಿ ಸರ್ವೇಗಳಲ್ಲೂ ನನಗೆ ಉತ್ತಮ ಫಲಿತಾಂಶವೇ ಸಿಕ್ಕಿದೆ. ಆದರೂ ನನಗೆ ಟಿಕೆಟ್ ನೀಡಿಲ್ಲ.

ನನ್ನ ಬಗ್ಗೆ ಯಾವುದೇ ಭ್ರಷ್ಟಚಾರ ಆರೋಪವಿಲ್ಲ. ನನ್ನ ಯಾವುದೇ ಅಶ್ಲೀಲ ಸಿಡಿಗಳಿಲ್ಲ.. ಕ್ರಿಮಿನಲ್‌ಗಳಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. 70 ವರ್ಷ ದಾಟಿದವರಿಗೆ ಟಿಕೆಟ್ ಕೊಟ್ಟಿದೆ. ಆದ್ರೆ ನನಗೆ ಟಿಕೆಟ್ ನೀಡದಿದ್ದಕ್ಕೆ ಕಾರಣ ಕೊಡಿ ಎಂದು ಶೆಟ್ಟರ್ ಸವಾಲು ಹಾಕಿದ್ರು.

ನನ್ನ ಯಾವುದೇ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರ ನೀಡಿಲ್ಲ. ನನಗೆ ಟಿಕೆಟ್‌ ಕೊಡದಿದ್ರೂ ಬೇಡ.. ಆದರೆ ಟಿಕೆಟ್‌ ನೀಡದಿದ್ದಕ್ಕೆ ಕಾರಣ ಕೇಳುತ್ತಿದ್ದೇನೆ. ನನ್ನ ಕುಟುಂಬದವರಿಗೆ ಟಿಕೆಟ್ ನೀಡಲು ನಾಯಕರು ಸಿದ್ದರಿದ್ದಾರೆ. ಆದರೆ ನನಗೆ ಟಿಕೆಟ್‌ ಯಾಕೆ ನಿರಾಕರಿಸಿದ್ರು ಅಂತ ಹೇಳುತ್ತಿಲ್ಲ.. ಇದೇ ನನಗೆ ಅತ್ಯಂತ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ ಶೆಟ್ಟರ್, ನಾಳೆ ಶಿರಸಿಗೆ ತೆರಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡೋದಾಗಿ ಘೋಷಿಸಿದ್ರು. ಇದೇ ವೇಳೆ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡೋದು ನಿಶ್ಚಿತ ಎಂದು ಹೇಳಿದ್ರು

ಹೆಚ್ಚಿನ ಸುದ್ದಿ