Monday, March 2, 2026
Homeಟಾಪ್ ನ್ಯೂಸ್ಖ್ಯಾತ ನಟ ಇನ್ನೋಸೆಂಟ್ ಇನ್ನಿಲ್ಲ: 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ

ಖ್ಯಾತ ನಟ ಇನ್ನೋಸೆಂಟ್ ಇನ್ನಿಲ್ಲ: 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ

ಕೊಚ್ಚಿ: ಜನಪ್ರಿಯ ಮಲಯಾಳಂ ನಟ ಮತ್ತು ಲೋಕಸಭೆಯ ಮಾಜಿ ಸಂಸದ, ಇನ್ನೋಸೆಂಟ್​​ (75) ಭಾನುವಾರ ನಿಧನರಾಗಿದ್ದಾರೆ.

ಈ ತಿಂಗಳ ಆರಂಭದಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ನಟ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಅಲ್ಲದೇ ಉಸಿರಾಟದ ಸಮಸ್ಯೆ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ಹೃದಯಾಘಾತವಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2012ರಲ್ಲಿ ನಟ ಇನ್ನೋಸೆಂಟ್‌ ಕ್ಯಾನ್ಸರ್​ಗೆ ತುತ್ತಾಗಿದ್ದರು. ಮೂರು ವರ್ಷಗಳ ನಂತರ ಅವರು ಅದನ್ನು ಗೆದ್ದು ಬಂದಿದ್ದರು. ಕ್ಯಾನ್ಸರ್​ ವಿರುದ್ಧದ ಹೋರಾಟದ ಬಗ್ಗೆ ನಟ ತಮ್ಮ ಪುಸ್ತಕ ‘ಲಾಫ್ಟರ್ ಇನ್ ದಿ ಕ್ಯಾನ್ಸರ್ ವಾರ್ಡ್’ನಲ್ಲಿ ಬರೆದಿದ್ದಾರೆ.

ಮಾಜಿ ಲೋಕಸಭಾ ಸಂಸದರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. “ಇನ್ನೋಸೆಂಟ್ ತಮ್ಮ ವಿಶಿಷ್ಟ ಶೈಲಿಯ ನಟನೆಯ ಮೂಲಕ ಜನರ ಹೃದಯವನ್ನು ಗೆದ್ದಿದ್ದರು. ಸಾರ್ವಜನಿಕ ವ್ಯಕ್ತಿಯಾಗಿ ಅವರು ಜನರಿಗೆ ತುಂಬಾ ಹತ್ತಿರವಾಗಿದ್ದರು ಎಂದು ಹೇಳಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಇನ್ನೋಸೆಂಟ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಇವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಮುಖ ನಟ, ನಟಿಯರು ಮತ್ತು ರಾಜಕಾರಣಿಗಳು ಸೇರಿದಂತೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

1948ರಲ್ಲಿ ಇಂರಿಂಜಲಕುಡದಲ್ಲಿ ಇನ್ನೋಸೆಂಟ್ ಜನಿಸಿದರು. 1972ರಲ್ಲಿ ಪ್ರೇಮ್ ನಜೀರ್ ಮತ್ತು ಜಯಭಾರತಿ ಅಭಿನಯದ ‘ನೃತ್ಯಶಾಲೆ’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಅವರು ಸತತ 12 ವರ್ಷಗಳ ಕಾಲ ಮಲಯಾಳಂ ಕಲಾವಿದರ ಸಂಘವಾದ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಹೆಚ್ಚಿನ ಸುದ್ದಿ