Monday, October 13, 2025
Homeಬೆಂಗಳೂರುಕೃಷಿ ಪ್ರಶಸ್ತಿ ಪುರಸ್ಕೃತರ ಮಕ್ಕಳ ಉನ್ನತ ಶಿಕ್ಷಣ ಶುಲ್ಕ ಭರಿಸಲಿರುವ ಸರ್ಕಾರ : ಸಿಎಂ ಬೊಮ್ಮಾಯಿ...

ಕೃಷಿ ಪ್ರಶಸ್ತಿ ಪುರಸ್ಕೃತರ ಮಕ್ಕಳ ಉನ್ನತ ಶಿಕ್ಷಣ ಶುಲ್ಕ ಭರಿಸಲಿರುವ ಸರ್ಕಾರ : ಸಿಎಂ ಬೊಮ್ಮಾಯಿ ಘೋಷಣೆ

ಕೃಷಿ ಪ್ರಶಸ್ತಿಗೆ ಭಾಜನರಾದವರ ಮಕ್ಕಳ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸೇರಿದಂತೆ ಉನ್ನತ ಶಿಕ್ಷಣದ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಅವರು ಕೃಷಿ ಇಲಾಖೆ ಹಾಗೂ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ರೈತ ಶಕ್ತಿ, ಕೃಷಿ ಕಾರ್ಮಿಕರ ಮಕ್ಕಳಿಗೆ ರೈತ ವಿದ್ಯಾ ನಿಧಿ, ಕೃಷಿ ಸಂಜೀವಿನಿ ವಾಹನಗಳ, ಡಾ. ಎಸ್.ವಿ.ಪಾಟೀಲ್, ಕೃಷಿ ಸಂಶೋಧನೆ, ತರಬೇತಿ ಹಾಗೂ ರೈತರ ಶ್ರೇಯೋಭಿವೃದ್ಧಿ ಪೀಠದ ಲೋಕಾರ್ಪಣೆ ನರವೇರಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು

ಈ ಬಾರಿ ರೈತರ ಪರವಾಗಿ ಬಜೆಟ್ ಇರಲಿದೆ. ಗ್ರಾಮೀಣ ಬದುಕು ಹಸನಾಗಬೇಕು. ಅಲ್ಲಿ ಆರ್ಥಿಕತೆ ಬೆಳೆದು ಸಾಮಾಜಿಕವಾಗಿ ಸಮಾನತೆ ತರುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಸಿಎಂ ಹೇಳಿದರು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ಕೃಷಿಗೆ ಪೂರಕವಾ ಇತರೆ ಕಸುಬುದಾರರಿಗೆ ಕಾಯಕ ಯೋಜನೆ ರೂಪಿಸಲಾಗಿದೆ.ವಿವೇಕಾನಂದ ಯುವಶಕ್ತಿ ಯೋಜನೆಯನ್ನು ಮುಂದಿನ ವಾರ ಉದ್ಘಾಟಿಸಲಾಗುತ್ತಿದೆ.ಸ್ತ್ರೀ ಶಕ್ತಿ ಯೋಜನೆ ಜಾರಿಗೆ ತಂದು ಸ್ವಯಂ ಉದ್ಯೋಗಕ್ಕೆ ನೆರವು ನೀಡಲಾಗುತ್ತಿದೆ ಎಂದರು.

ಕೃಷಿ ಇನ್ನಷ್ಟು ಉತ್ತಮಗೊಳ್ಳಲು ಸಣ್ಣ ಸಣ್ಣ ರೈತರ ಮಟ್ಟಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹೊಸ ಮಾದರಿಯ ಗೋದಾಮುಗಳನ್ನು ನಿರ್ಮಿಸುವುದಕ್ಕೆ ಸರ್ಕಾರ ಚಿಂತನೆ ಮಾಡುತ್ತಿದೆ. ಈ ಮೂಲಕ ರೈತ ತನ್ನ ಬೆಳೆಗೆ ಬೆಲೆ ಬಂದಾಗ ಮಾರಾಟ ಮಾಡಬಹುದು ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲರು ರಾಜ್ಯದಲ್ಲಿ ಪ್ರಥಮ ಬಾರಿಗೆ 12 ಶೀತಲಾಗಾರಗಳನ್ನು ಸ್ಥಾಪಿಸಿದ್ದಾರೆ. ರೈತ ಸಂಜೀವಿನಿ ವಾಹನಗಳು, ಪ್ರಯೋಗಾಲಯಗಳಿಂದ ರೈತರ ಹೊಲಕ್ಕೆ ಸಂಶೋಧನೆಗಳು ಬರುತ್ತಿವೆ. ಕೃಷಿಯಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಇಂದು ಪ್ರಶಸ್ತಿ ನೀಡಲಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕಾರ್ಯಕ್ರಮಗಳನ್ನು ರೂಪಿಸುವಾಗ ಕಟ್ಟಕಡೆಯ ವ್ಯಕ್ತಿಯ ಬದುಕನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮ ರೂಪಿಸಬೇಕು. ಸರ್ಕಾರದ ಆರ್ಥಿಕ ನೆರವಿನಿಂದ ತಮ್ಮ ಮಕ್ಕಳನ್ನು ಓದಿಸಬಹುದೆಂಬ ಆತ್ಮವಿಶ್ವಾಸ ಈ ಕುಟುಂಬಗಳಿಗೆ ಬಂದಿದೆ. ಕಟ್ಟಡ ಕೂಲಿಕಾರ್ಮಿಕರ 5 ಲಕ್ಷ ವಿದ್ಯಾರ್ಥಿಗಳಿಗೆ ಯೋಜನೆ ತಲುಪಿದೆ. ದುಡಿಯುವ ವರ್ಗಕ್ಕೆ ಬಲ ತುಂಬಬೇಕು ಎಂದರು.

ಕೃಷಿ ಕ್ಷೇತ್ರದ ಅಭಿವೃದ್ಧಿಯಾಗುತ್ತಿದ್ದರೂ ರೈತರ ಸ್ಥಿತಿ ಸುಧಾರಿಸಿಲ್ಲ. ಆದ್ದರಿಂದ ರೈತರು ಸ್ವಾವಲಂಬನೆಯ ಬದುಕು ಬದುಕಲು, ಆದಾಯ ಹೆಚ್ಚಿಸಲು, ರೈತ ಮಕ್ಕಳು ವಿವಿಧ ವೃತ್ತಿಯಲ್ಲಿ ತೊಡಗಿಕೊಳ್ಳಬೇಕೆಂಬ ಉದ್ದೇಶದಿಂದ ಸರ್ಕಾರ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಕೇವಲ ನಗರಪ್ರದೇಶದ ಮಕ್ಕಳಿಗೆ ಶಿಕ್ಷಣ ಮೀಸಲಾಗಬಾರದು. ಗ್ರಾಮೀಣ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ ಅವಕಾಶಗಳನ್ನು ನೀಡುವ ಸಲುವಾಗಿ ರೈತ ವಿದ್ಯಾನಿಧಿಯನ್ನು ಜಾರಿಗೆ ತಂದಿದೆ. 11 ಲಕ್ಷ ರೈತರ ಮಕ್ಕಳಿಗೆ 488 ಕೋಟಿ ರೂ.ಗಳ ವಿದ್ಯಾನಿಧಿ ನೀಡಲಾಗಿದೆ. ಇಂದು ನೀಡಲಾಗಿರುವ ರೈತಶಕ್ತಿ ಯೋಜನೆ, ರೈತ ವಿದ್ಯಾನಿಧಿ ಯೋಜನೆಗಳಿಗೆ ಫಲಾನುಭವಿಗಳಿಂದ ಯಾವುದೇ ಅರ್ಜಿ ಪಡೆಯಲಾಗಿಲ್ಲ. ಒಮ್ಮೆ ದಲಿತ ರೈತರ ಮಗಳು ನನ್ನನ್ನು ಭೇಟಿಯಾದಳು. ಆ ಹೆಣ್ಣುಮಗಳು ಎಸ್ ಸಿ ಎಸ್ ಟಿ ವಿದ್ಯಾರ್ಥಿ ವೇತನ ಹಾಗೂ ರೈತ ವಿದ್ಯಾನಿಧಿಗಳೆರಡೂ ಲಭಿಸಿದೆ ಎಂದು ಸ್ಮರಿಸಿದರು.

ಕೇಂದ್ರ ಸರ್ಕಾರ ನೀಡುವ ಬೆಳೆಹಾನಿ ಪರಿಹಾರದ ಜೊತೆಗೆ ರಾಜ್ಯಸರ್ಕಾರದ ಪರಿಹಾರವನ್ನು ಸೇರಿಸಿ ದುಪ್ಪಟ್ಟು ಬೆಳೆಹಾನಿ ಪರಿಹಾರವನ್ನು ನೀಡಲಾಗುತ್ತಿದೆ. 14 ಲಕ್ಷ ರೈತರಿಗೆ 1900 ಕೋಟಿ ರೂ.ಗಳ ಬೆಳೆಹಾನಿ ಪರಿಹಾರವನ್ನು ಎರಡು ತಿಂಗಳ ಅವಧಿಯೊಳಗೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಸಕ್ಕರೆ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಸಿದ್ದು ಸವದಿ, ಅರವಿಂದ ಬೆಲ್ಲದ್, ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ್, ಧಾರವಾಡ ವಿವಿ ಕುಲಪತಿ ಡಾ:ಪಿ.ಎಲ್. ಪಾಟೀಲ್, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ