ಬೆಂಗಳೂರು: ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೆಲ ಅಚ್ಚರಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿ.ಸೋಮಣ್ಣ ಹಾಗೂ ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಆರ್.ಅಶೋಕ್ ಅವರನ್ನು ಕಣಕ್ಕಿಸಿದೆ. ಇದೀಗ ಕೊನೆ ಕ್ಷಣದಲ್ಲಿ ಬಿಜೆಪಿ ಮತ್ತೊಂದು ರಣತಂತ್ರ ಮಾಡಿದ್ದು, ಹಾಸನದ ಹೊಳೆನರಸೀಪುರ ಕ್ಷೇತ್ರದಲ್ಲಿ ಹೆಚ್.ಡಿ.ರೇವಣ್ಣ ವಿರುದ್ಧ ಶಾಸಕ ಪ್ರೀತಂಗೌಡ ಅವರನ್ನು ಸ್ಪರ್ಧೆಗಿಳಿಸಿದೆ ಎನ್ನಲಾಗುತ್ತಿದೆ.
ಈಗಾಗಲೇ ಪ್ರೀತಂಗೌಡ ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಹಾಸನದ ಗುಡ್ಡೇನಹಳ್ಳಿ ಬಡಾವಣೆಯಲ್ಲಿ ಪ್ರಚಾರದ ವೇಳೆ ಕಾರ್ಯಕರ್ತರ ಜೊತೆ ಮಾತನಾಡಿದ ಪ್ರೀತಂಗೌಡ, ಹೊಳೆನರಸೀಪುರದಲ್ಲಿ ನಾಮಿನೇಷನ್ ಮಾಡಬೇಕು ಹಾಗಾಗಿ ಬೇಗ ಮುಗಿಸಿ ಎನ್ನುವ ಮಾತುಗಳನ್ನಾಡಿದ್ದಾರೆ. ಅಲ್ಲದೇ, ಪ್ರಚಾರ ಕಾರ್ಯಕ್ರಮದಿಂದ ತರಾತುರಿಯಲ್ಲಿ ನಿರ್ಗಮಿಸಿದ್ದಾರೆ. ಇದು ಹೊಳೆನರಸೀಪುರದಿಂದ ಸ್ಪರ್ಧೆಗಿಳಿಯಲಿದ್ದಾರೆಯೇ ಎಂಬ ಕುತೂಹಲ ಮೂಡಿಸಿದೆ.
ಈಗಾಗಲೇ ಬಿಜೆಪಿ ಮೊದಲ ಪಟ್ಟಿಯಲ್ಲಿ ದೇವರಾಜೇಗೌಡ ಅವರ ಹೆಸರನ್ನು ಹೊಳೆನರಸೀಪುರ ಕ್ಷೇತ್ರಕ್ಕೆ ಪ್ರಕಟಿಸಿತ್ತು. ಆದರೆ, ದಿಢೀರ್ ಮಹತ್ವ ರಾಜಕೀಯ ಬೆಳವಣಿಗೆ ನಡೆದಿದ್ದು, ಅಂತಿಮವಾಗಿ ರೇವಣ್ಣ ವಿರುದ್ಧ ಪ್ರತೀಂಗೌಡ ಅವರನ್ನು ಕಣಕ್ಕಿಳಿಸುವ ತಂತ್ರಗಳು ನಡೆದಿವೆ.
