ಚಿಕ್ಕಮಗಳೂರು: ಕಾಂಗ್ರೆಸ್ ಟಿಕೆಟ್ ವಂಚಿತ ವೈಎಸ್‌ವಿ ದತ್ತಾ ಗುರುವಾರ ಮಾತೃ ಪಕ್ಷ ಜೆಡಿಎಸ್ ಗೆ ಮರಳಿದ್ದಾರೆ. ಬುಧವಾರ ರಾತ್ರಿ ಜೆಡಿಎಸ್ ವರಿಷ್ಠ ದೇವೇಗೌಡರೊಡನೆ ಭೇಟಿಯಾಗಿ ಅವರು ಚರ್ಚೆ ನಡೆಸಿದ್ದರು. ಇಂದು ವೈಎಸ್‌ವಿ ದತ್ತ ಮನೆಗೆ ಖುದ್ದಾಗಿ ಭೇಟಿ ನೀಡಿದ ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಕಡೂರಿನಿಂದ ವೈಎಸ್‌ವಿ ದತ್ತರಿಗೆ ಟಿಕೆಟ್ ನೀಡುವುದಾಗಿ ಘೋಷಿಸಿದ್ದಾರೆ.
ಈಗ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಧನಂಜಯ್ ಅವರಿಗೆ ತಳಮಳ ಶುರುವಾಗಿದೆ. ಕಡೂರಿನಿಂದ ಟಿಕೆಟ್ ಪಡೆದಿದ್ದ ಧನಂಜಯ್ ಈಗಾಗಲೇ ಪ್ರಚಾರವನ್ನೂ ಪ್ರಾರಂಭಿಸಿದ್ದರು. ಈಗ ಏಕಾಏಕಿ ದತ್ತ ಅವರು ಪಕ್ಷಕ್ಕೆ ಮರಳಿದ್ದು, ಮತ್ತವರಿಗೆ ಟಿಕೆಟ್ ಘೋಷಿಸಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ಕುರಿತು ಪ್ರಜ್ವಲ್ ರೇವಣ್ಣ ಕೂಡ ಪ್ರತಿಕ್ರಿಯಿಸಿ, ವೈಎಸ್‌ವಿ ದತ್ತರನ್ನು ನಮ್ಮ ಕಡೆ ಕಳಿಸಿಕೊಡಲಿ, ಅವರಿಗೆ ಬೆಲೆ ಗೌರವ ನೀಡುತ್ತೇವೆ. ನಮ್ಮ ಕುಟುಂಬ ವೈಎಸ್‌ವಿ ದತ್ತ ಅವರೊಡನೆ ನಿಲ್ಲಲಿದೆ ಎಂದಿದ್ದಾರೆ.
ಈ ಬಗ್ಗೆ ನನಗೆ ವರಿಷ್ಠರಿಂದ ಇದುವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಅವರ ತೀರ್ಮಾನಕ್ಕೆ ನಾನು ಬದ್ದ ಎಂದು ಧನಂಜಯ್ ಹೇಳಿಕೆ ನೀಡುವ ಮೂಲಕ ಚೆಂಡನ್ನು ಎಚ್.ಡಿ.ಕುಮಾರಸ್ವಾಮಿ ಅಂಗಳಕ್ಕೆ ತಳ್ಳಿದ್ದಾರೆ.
