Monday, July 7, 2025
Homeದೇಶನೇಪಾಳದಲ್ಲಿ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಜೀವಂತವಾಗಿ ಪತ್ತೆ

ನೇಪಾಳದಲ್ಲಿ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಜೀವಂತವಾಗಿ ಪತ್ತೆ

ಕಠ್ಮಂಡು: ನೇಪಾಳದ ಅನ್ನಪೂರ್ಣ ಪರ್ವತವನ್ನು ಏರುತ್ತಿದ್ದ ವೇಳೆ ಆಳವಾದ ಬಿರುಕಿನೊಳಗೆ ಬಿದ್ದು ನಾಪತ್ತೆಯಾಗಿದ್ದ ಭಾರತೀಯ ಪರ್ವತಾರೋಹಿ ಅನುರಾಗ್ ಮಾಲೂ ಜೀವಂತವಾಗಿ ಪತ್ತೆಹಚ್ಚಲಾಗಿದೆ.

34 ವರ್ಷದ ಭಾರತೀಯ ವಾಣಿಜ್ಯೋದ್ಯಮಿ ಮತ್ತು ಅನುಭವಿ ಪರ್ವತಾರೋಹಿ ಅನುರಾಗ್ ಮಾಲೂ ಸೋಮವಾರ ನಾಪತ್ತೆಯಾಗಿದ್ದರು. ಸೋಮವಾರ 4ನೇ ಕ್ಯಾಂಪ್‌ನಿಂದ ಹಿಂತಿರುಗುತ್ತಿದ್ದಾಗ 3ನೇ ಕ್ಯಾಂಪ್ ಬಳಿ ಬಿರುಕಿನಲ್ಲಿ ಬಿದ್ದಿದ್ದರು. ಅನ್ನಪೂರ್ಣ ಪರ್ವತ ವಿಶ್ವದ 10ನೇ ಅತಿ ಎತ್ತರದ ಪರ್ವತವಾಗಿದೆ.

ಇದೀಗ ಅನುರಾಗ್ ಅವರನ್ನು ರಕ್ಷಣಾ ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ಅನುರಾಗ್ ಸದ್ಯ ಜೀವಂತವಾಗಿ ಪತ್ತೆಯಾಗಿದ್ದರೂ ಅವರ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕಿದೆ ಎಂದು ಅನುರಾಗ್ ಸಹೋದರ ಸುಧೀರ್ ಹೇಳಿದ್ದಾರೆ.

ಅನುರಾಗ್ ರಾಜಸ್ಥಾನದ ಕಿಶನ್‌ಗಢ್ ಮೂಲದವರಾಗಿದ್ದು, ರೆಕ್ಸ್ ಕರಮ್‌ವೀರ್ ಚಕ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅನುಭವಿ ಪರ್ವತಾರೋಹಿಯಾಗಿರುವ ಮಾಲೂ ಕಳೆದ ವರ್ಷ ಮೌಂಟ್ ಅಮಾ ದಬ್ಲಾಮ್ ಹತ್ತಿದ್ದರು. ಈ ಋತುವಿನಲ್ಲಿ ನೇಪಾಳದ ಮೌಂಟ್ ಎವರೆಸ್ಟ್, ಅನ್ನಪೂರ್ಣ ಮತ್ತು ಲೊಟ್ಸೆಯನ್ನು ಏರುವ ಯೋಜನೆಯನ್ನು ಅವರು ಮಾಡಿದ್ದರು.

8,000 ಮೀ. ಎತ್ತರದ ಎಲ್ಲಾ 14 ಶಿಖರಗಳನ್ನು ಮತ್ತು ಎಲ್ಲಾ 7 ಖಂಡಗಳಲ್ಲಿನ 7 ಎತ್ತರದ ಪ್ರದೇಶಗಳನ್ನು ಏರುವುದು ಮಾಲೂ ಗುರಿಯಾಗಿದೆ.

ಹೆಚ್ಚಿನ ಸುದ್ದಿ