ಬೆಂಗಳೂರು: ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡಿರುವ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಹೈಕಮ್ಯಾಂಡ್ನೊಂದಿಗೆ ಚರ್ಚಿಸುವ ಸಲುವಾಗಿ ಬುಧವಾರ ದೆಹಲಿಯೆಡೆಗೆ ಪ್ರಯಾಣ ಬೆಳೆಸಿದ್ದಾರೆ. ಬಿಜೆಪಿ ಟಿಕೆಟ್ ನೀಡುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆಯೇ ಬಂಡಾಯವೆದ್ದಿದ್ದ ಜಗದೀಶ್ ಶೆಟ್ಟರ್, ಟಿಕೆಟ್ ನೀಡಲಿ ಬಿಡಲಿ ನಾನು ಸ್ಪರ್ಧಿಸುವುದಂತೂ ಖಚಿತ ಎಂದಿದ್ದರು.
ದೆಹಲಿಗೆ ಹೊರಡುವ ಮುನ್ನ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಸಿದ ಅವರು, ಬಿಜೆಪಿ ವರಿಷ್ಠರಿಂದ ಸಕಾರಾತ್ಮಕ ಸ್ಪಂದನೆ ಸಿಗುವ ಭರವಸೆಯಿದೆ. ಅಭಿವೃದ್ಧಿ ಮಾಡಲು ಅಧಿಕಾರ ಮುಖ್ಯವಲ್ಲ. ಮುಖ್ಯಮಂತ್ರಿಯಾಗಿ ಆರು ಬಾರಿ ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಆದರೆ ಟಿಕೆಟ್ ಕೈತಪ್ಪಿದ ಕಾರಣ ಗೊತ್ತಿಲ್ಲ. ಅದನ್ನು ತಿಳಿಯಲೆಂದೇ ದೆಹಲಿಗೆ ಹೋಗುತ್ತಿದ್ದೇನೆ ಎಂದರು.
ನಮ್ಮ ಮಂತ್ರಿಗಳ ಮುಖಾಂತರ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದೆ. ನಾನೂ ಸಹ ರಾಜಕೀಯ ನಿವೃತ್ತಿಗೆ ಸಿದ್ದನಿದ್ದೇನೆ. ಆದರೆ ರಾಜಕಾರಣದಲ್ಲಿ ಗೌರವಯುತವಾಗಿ ನಿರ್ಗಮಿಸಬೇಕೆಂಬುದು ನನ್ನ ಆಸೆ. ಈ ರೀತಿ ಉಚ್ಛಾಟಿತರಾಗಿ ಹೋಗಬಾರದು. ರಾಷ್ಟ್ರೀಯ ನಾಯಕರನ್ನು ಭೇಟಿಯಾದ ಬಳಿಕ ನನ್ನ ನಿರ್ಧಾರ ಪ್ರಕಟಿಸಲಿದ್ದೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
