ಕೋಲಾರ: ಕೋಲಾರದಲ್ಲಿ ಇಂದು ಜೈ ಭಾರತ್ ಸಮಾವೇಶವನ್ನು ಉದ್ದೇಶಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 200 ಯುನಿಟ್ ವಿದ್ಯುತ್, ಅನ್ನಭಾಗ್ಯ ಯೋಜನೆ ಅಡಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಎಂದು ಭರವಸೆ ನೀಡಿದರು.
ನನ್ನನ್ನು ಬಗ್ಗಿಸಲು ಬಿಜೆಪಿ ಅವರು ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ನಾನು ಈ ಬಗ್ಗೆ ಹೆದರುವುದಿಲ್ಲ. ಮೋದಿ ಅವರೇ ನಿಮಗೂ ಅದಾನಿಗೂ ಏನ್ ಸಂಬಂಧ? ಎಲ್ಲಿವರೆಗೂ ಈ ಪ್ರಶ್ನೆಗೆ ಉತ್ತರ ಸಿಗುವುದಿಲ್ಲವೋ ಅಲ್ಲಿವರೆಗೂ ನಾನು ಹೋರಾಟ ಮಾಡುತ್ತೇನೆ. ನನ್ನನ್ನು ಜೈಲಿಗಟ್ಟಲು ಪ್ರಯತ್ನಿಸಿದರೂ ನಾನು ಬಗ್ಗುವುದಿಲ್ಲ ಎಂದು ರಾಹುಲ್ ಗಾಂಧಿ ಆಕ್ರೋಶಗೊಂಡರು.
ನಾನು ಓಬಿಸಿ ಸಮುದಾಯವನ್ನು ಅವಮಾನಿಸಿದ್ದೇನೆ ಎಂದು ನನ್ನನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದೀರಿ. ಆದರೆ ಆಡಳಿತಾತ್ಮಕವಾಗಿ ಬಿಜೆಪಿ ಸರ್ಕಾರ ಒಬಿಸಿಗೆ ನಿಜವಾದ ಅವಮಾನ ಮಾಡಿದೆ. ಸರ್ಕಾರೀ ಉದ್ಯೋಗದಲ್ಲಿ ಇಂದಿನವರೆಗೂ ಕೇವಲ 7% ಮಾತ್ರ ಓಬಿಸಿ ವರ್ಗದವರು ಕೆಲಸ ಪಡೆಯಲು ಸಾಧ್ಯವಾಗಿದೆ. ಇದು ಆ ಸಮುದಾಯಕ್ಕಾದ ನಿಜವಾದ ಅವಮಾನ ಎಂದು ರಾಹುಲ್ ಬಿಜೆಪಿ ವಿರುದ್ಧ ಹರಿಹಾಯ್ದರು
ಇದೇ ವೇಳೆ ಮತಬೇಟೆಗಿಳಿದ ರಾಹುಲ್ ಗಾಂಧಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಕರ್ನಾಟಕದಲ್ಲಿನ 40% ಸರ್ಕಾರವನ್ನು ಕಿತ್ತೊಗೆಯಿರಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈಗಾಗಲೇ ನಾವು ಘೋಷಿಸಿರುವ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದ್ರು
