ಬೆಂಗಳೂರು- ವಿಧಾನಸಭಾ ಚುನಾವಣಾ ಕಣಕ್ಕೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಶುಕ್ರವಾರ ಸಂಜೆ ನಗರದ ಜೆಡಿಎಸ್ ಕಾರ್ಯಾಲಯದಲ್ಲಿ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ 93. ಅಭ್ಯರ್ಥಿಗಳನ್ನು ಘೋಷಿಸಿದ್ದ ಎಚ್.ಡಿ. ಕುಮಾರಸ್ವಾಮಿ, ಈಗ 49 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದ್ದಾರೆ.
ಕೇವಲ ಎರಡು ತಿಂಗಳ ಹಿಂದಷ್ಟೇ ಮುನಿಸಿಕೊಂಡು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ವೈಎಸ್‌ವಿ ದತ್ತ ಎರಡು ದಿನಗಳ ಹಿಂದಷ್ಟೇ ಮತ್ತೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಕಡೂರು ಕ್ಷೇತ್ರದಿಂದ ಸ್ಥಾನ ಪಡೆಯುವ ಮೂಲಕ ದತ್ತ ಎಲ್ಲರ ಹುಬ್ಬೇರಿಸಿದ್ದಾರೆ. ಅಥಣಿಯಲ್ಲಿ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಲಕ್ಷ್ಮಣ್ ಸವದಿ ಹಾಗೂ ಮಹೇಶ್ ಕುಮಠಳ್ಳಿ ವಿರುದ್ಧ ಸ್ಪರ್ಧಿಸಲು ಶಶಿಕಾಂತ ಪಡಸಲಗಿಯವರನ್ನು ಕಣಕ್ಕಿಳಿಸಲಾಗಿದೆ. ಹೊಳೆನರಸೀಪುರದಿಂದ ಸ್ವತಃ ಎಚ್.ಡಿ.ರೇವಣ್ಣ ಸ್ಪರ್ಧಿಸುತ್ತಿದ್ದು, ಹಾಸನದಿಂದ ಭವಾನಿ ರೇವಣ್ಣನವರಿಗೆ ಟಿಕೆಟ್ ಕೊಡದೆ ಸ್ವರೂಪ್ ಪ್ರಕಾಶ್ ಗೌಡರಿಗೆ ಟಿಕೆಟ್ ನೀಡಲಾಗಿದೆ.