ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ರಂತೆ ಬೇರೆ ಯಾರೂ ಇರಲಿಕ್ಕಿಲ್ಲ ಎಂದು ನಟಿ ಕಂಗನಾ ರಾಣಾವತ್ ಹೊಗಳಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ರೌಡಿಸಂ ಮಾಡುತ್ತಿದ್ದ ಹಲವರನ್ನು ಎನ್‌ಕೌಂಟರ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಪ್ರತಿಕ್ರಿಯಿಸಿದ್ದಾರೆ. ಉಮೇಶ್ ಪಾಲ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ನ ಪುತ್ರ ಅಸದ್ ಮತ್ತು ಆತನ ಸಹಚರನನ್ನು ಪೊಲೀಸ್ ಎನ್‌ಕೌಂಟರ್ ಮಾಡಿರುವುದನ್ನು ಕಂಗನಾ ಹಾಡಿ ಹೊಗಳಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಯೋಗಿ ನೀಡಿದ ಹೇಳಿಕೆಯ ವೀಡಿಯೊವನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ಅವರು,’ನನ್ನ ಸಹೋದರ ಯೋಗಿ ಆದಿತ್ಯನಾಥ್ ರಂತೆ ಯಾರೂ ಇಲ್ಲʼ ಎಂದು ಹೇಳಿದ್ದಾರೆ.
2005ರಲ್ಲಿ ಬಿಎಸ್‌ಪಿ ಶಾಸಕರೊಬ್ಬರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅಸದ್ ನನ್ನು ಎನ್‌ಕೌಂಟರ್ ಮಾಡಲಾಗಿದೆ.
2005ರಲ್ಲಿ ಅಲಹಾಬಾದ್ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ನಾಯಕ ರಾಜು ಪಾಲ್ ಗೆದ್ದಿದ್ದರು. ಇದಾದ 1 ತಿಂಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಬಿಎಸ್‌ಪಿ ಶಾಸಕ ರಾಜು ಪಾಲ್ ಅವರ ಕೊಲೆಯ ಪ್ರತ್ಯಕ್ಷದರ್ಶಿ ಹಾಗೂ ವಕೀಲ ಉಮೇಶ್ ಪಾಲ್ ಅವರನ್ನು ಅವರ ನಿವಾಸದ ಹೊರಭಾಗದಲ್ಲಿ ಹಾಡಹಗಲೇ ಅತಿಕ್ ಅಹಮ್ಮದ್ ಗ್ಯಾಂಗ್ ಗುಂಡಿನ ದಾಳಿ ನಡೆಸಿ ಕೊಂದಿತ್ತು.
