ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿಯ ಹೆಸರು ಉಲ್ಲೇಖಿಸಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ನಟ ಚೇತನ್ ಕುಮಾರ್ ಅವರ ಭಾರತದ ಸಾಗರೋತ್ತರ ನಾಗರಿಕ (ಒಸಿಐ) ವೀಸಾವನ್ನು ಕೇಂದ್ರ ಗೃಹ ಸಚಿವಾಲಯ ರದ್ದುಪಡಿಸಿದೆ.
ಒಸಿಐ ವೀಸಾ ರದ್ದು ಬಗ್ಗೆ ನಟ ಚೇತನ್ ಅಹಿಂಸಾ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಕಾನೂನುಬದ್ಧವಾದ ಸೂಕ್ತ ಕಾರಣ ನೀಡದೇ ನನ್ನ ಒಸಿಐ ವೀಸಾ ರದ್ದು ಮಾಡಲಾಗಿದ್ದು, ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲು ಸಿದ್ಧತೆ ಮಾಡುತ್ತಿದ್ದೇನೆ ಎಂದು ಚೇತನ್ ತಿಳಿಸಿದ್ದಾರೆ.
‘18 ವರ್ಷದಿಂದ ನಾನು ಭಾರತದಲ್ಲಿದ್ದೇನೆ. ಭಾರತೀಯ ಯುವತಿಯನ್ನು ಮದುವೆಯಾಗಿದ್ದೇನೆ. 12 ವರ್ಷಗಳಿಂದ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಸಿದ್ಧಾಂತವನ್ನು ಸೋಲಿಸಲು ಆಗದವರು, ಅನ್ಯ ಮಾರ್ಗಗಳ ಮೂಲಕ ನನ್ನ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಇದಕ್ಕೆ ಕಾನೂನಿನ ಮೂಲಕವೇ ಉತ್ತರ ನೀಡುತ್ತೇನೆ’ ಎಂದು ಚೇತನ್ ಹೇಳಿದ್ದಾರೆ.
ಈ ಸಂಬಂಧ ಚೇತನ್ ಅವರಿಗೆ ಪತ್ರ ಕಳುಹಿಸಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಅಧಿಕಾರಿಗಳು, ‘15 ದಿನದೊಳಗೆ ಒಸಿಐ ಕಾರ್ಡ್ ಹಿಂದಿರುಗಿಸಿ’ ಎಂದು ಸೂಚನೆ ನೀಡಿದ್ದಾರೆ.
‘ಬ್ಯಾಹ್ಮಣ್ಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಪ್ರಕರಣಕ್ಕೆ ನ್ಯಾಯಾಲಯದ ತಡೆಯಾಜ್ಞೆ ಇದೆ. ಉಳಿದಂತೆ, ಮೂರು ಪ್ರಕರಣಗಳಲ್ಲಿ ವಿಚಾರಣೆ ನಡೆಯುತ್ತಿದೆ. ನನ್ನ ವಿರುದ್ಧದ ಯಾವುದೇ ಪ್ರಕರಣ ಸಾಬೀತಾಗಿಲ್ಲ. ಹೀಗಿರುವಾಗ ಏಕಾಏಕಿ ವೀಸಾ ರದ್ದುಪಡಿಸಿರುವುದು ನ್ಯಾಯಸಮ್ಮತವಲ್ಲ ಎಂದು ಚೇತನ್ ಹೇಳಿದ್ದಾರೆ.