Monday, July 7, 2025
Homeವಿದೇಶಅಮೇರಿಕ, ಇಂಗ್ಲೆಂಡಿನ ರಾಯಭಾರ ಕಛೇರಿಗೆ ಖಲಿಸ್ತಾನಿಗಳ ಮುತ್ತಿಗೆ: ತ್ರಿವರ್ಣ ಧ್ವಜ ಇಳಿಸಿ ಉದ್ಧಟತನ

ಅಮೇರಿಕ, ಇಂಗ್ಲೆಂಡಿನ ರಾಯಭಾರ ಕಛೇರಿಗೆ ಖಲಿಸ್ತಾನಿಗಳ ಮುತ್ತಿಗೆ: ತ್ರಿವರ್ಣ ಧ್ವಜ ಇಳಿಸಿ ಉದ್ಧಟತನ

ಪಂಜಾಬ್‌ ಪ್ರತ್ಯೇಕತಾವಾದಿ ನಾಯಕ ಅಮೃತ್‌ ಪಾಲ್‌ ಸಿಂಗ್‌ ಬಂಧನಕ್ಕೆ ಪಂಜಾಬಿನಲ್ಲಿ ನಡೆದ ಕಾರ್ಯಾಚರಣೆಗೆ ಅಮೇರಿಕಾ, ಆಸ್ಟ್ರೇಲಿಯಾ ಸೇರಿದಂತೆ ಇಂಗ್ಲೆಂಡಿನಲ್ಲೂ ಪ್ರತಿರೋಧ ವ್ಯಕ್ತವಾಗಿದೆ. ಲಂಡನ್‌ ನಲ್ಲಿರುವ ರಾಯಭಾರ ಕಛೇರಿಗೆ ಮುತ್ತಿಗೆ ಹಾಕಿರುವ ಖಲಿಸ್ತಾನಿ ಬೆಂಬಲಿಗರು, ಖಲಿಸ್ತಾನಿ ಪರ ಘೋಷಣೆ ಕೂಗಿದ್ದಾರೆ.

ರಾಯಭಾರ ಕಛೇರಿಯಲ್ಲಿ ಹಾರಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಕೆಳಕ್ಕಿಳಿಸಿ ಅವಮಾನಿಸಿದ ಖಲಿಸ್ತಾನಿಗಳು, ಖಲಿಸ್ತಾನಿ ಬಾವುಟವನ್ನು ಹಾರಿಸಲು ಪ್ರಯತ್ನಿಸಿದ್ದಾರೆ. ಅಮೇರಿಕಾದಲ್ಲೂ ಇದೇ ರೀತಿಯ ಪ್ರತಿಭಟನೆ ವ್ಯಕ್ತವಾಗಿದ್ದು, ಖಾಲಿಸ್ತಾನ ಪರ ಪ್ರತಿಭಟನಾಕಾರರ ಗುಂಪು, ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ಭಾರತದ ರಾಯಭಾರ ಕಚೇರಿ ಮೇಲೆಯೂ ದಾಳಿ ನಡೆಸಿ,  ಕಚೇರಿ ಆವರಣದಲ್ಲಿ ಎರಡು ಖಾಲಿಸ್ತಾನ ಧ್ವಜಗಳನ್ನು ಹಾರಿಸಿದ್ದಾರೆ.

ಕಳೆದ ವಾರ, ಖಲಿಸ್ತಾನಿ ಮೂಲಭೂತವಾದಿಗಳ ಬೆದರಿಕೆಯಿಂದಾಗಿ ಆಸ್ಟ್ರೇಲಿಯಾವು ಭಾರತೀಯ ದೂತಾವಾಸವನ್ನು ಮುಚ್ಚಿತ್ತು. ಬ್ರಿಸ್ಬೇನ್‌ನ ತರಿಂಗಾ ಉಪನಗರದ ಸ್ವಾನ್ ರಸ್ತೆಯ ಬಳಿ ಇರುವ ರಾಯಭಾರ ಕಛೇರಿಯ ಪ್ರವೇಶವನ್ನು ಖಾಲಿಸ್ತಾನಿ ಉಗ್ರಗಾಮಿಗಳು ನಿರ್ಬಂಧಿಸಿದ್ದರಿಂದ ಮುಚ್ಚಬೇಕಾಯಿತು.

ಉದ್ರಿಕ್ತರ ಗುಂಪು ರಾಯಭಾರ ಕಚೇರಿಗೆ ನುಗ್ಗಿ ಬಾಗಿಲು, ಕಿಟಕಿಗಳನ್ನು ಕಬ್ಬಿಣದ ರಾಡ್‌ಗಳಿಂದ ಒಡೆದು ಹಾಕಿದೆ. ಈ ಎರಡೂ ಘಟನೆಗಳಿಗೆ ಅನಿವಾಸಿ ಭಾರತೀಯರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಲಂಡನೆ ಘಟನೆ ಸಂಬಂಧಿಸಿದಂತೆ ಭಾರತ ವಿದೇಶಾಂಗ ಇಲಾಖೆಯು ಇಂಗ್ಲೆಂಡ್‌ ರಾಯಭಾರಿಗೆ ಸಮನ್ಸ್‌ ನೀಡಿದ್ದು, ಭಾರತೀಯ ದೂತವಾಸ ಕಛೇರಿಗೆ ರಕ್ಷಣೆ ನೀಡದಿರುವ ಬಗ್ಗೆ ಪ್ರಶ್ನಿಸಿದೆ. ಅಲ್ಲದೆ, ಕೃತ್ಯದಲ್ಲಿ ಭಾಗಿಯಾದವರನ್ನು ಗುರುತಿಸಿ ತಕ್ಷಣವೇ ಬಂಧಿಸಲು ಒತ್ತಾಯಿಸಿದೆ.

ಕೋಮು ಸಂಘರ್ಷ ಹರಡಲು ಯತ್ನಿಸಿದ ಆರೋಪದಲ್ಲಿ, ಖಾಲಿಸ್ತಾನ್ ಪರ ಸಹಾನುಭೂತಿ ಹೊಂದಿರುವ ಆರೋಪದ ಮೇಲೆ ಸಿಖ್ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಅವರ ಹಲವಾರು ಬೆಂಬಲಿಗರನ್ನು ಬಂಧಿಸಿದ್ದಾರೆ.ಇದರ ವಿರುದ್ಧ ವಿದೇಶದಲ್ಲಿರುವ ಖಲಿಸ್ತಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಹೆಚ್ಚಿನ ಸುದ್ದಿ