ಬೆಂಗಳೂರು: ಮಾಜಿ ಡಿಸಿಎಂ ಲಕ್ಷ್ಮಣ ಸವಧಿ ಶುಕ್ರವಾರ ಸಂಜೆ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ರಣ್‌ದೀಪ್ ಸುರ್ಜೇವಾಲಾ ಮತ್ತಿತರ ನಾಯಕರ ಸಮ್ಮುಖದಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ಕಾಂಗ್ರೆಸ್ ಸೇರ್ಪಡೆಗೊಂಡರು.
ಡಿ.ಕೆ.ಶಿವಕುಮಾರ್ ಮೊದಲಿಗೆ ಮಾತನಾಡಿ, ರಾಷ್ಟ್ರ ಮತ್ತು ರಾಜಕಾರಣದಲ್ಲಿ ಇದೊಂದು ಮಹತ್ವದ ದಿನ ಎಂದು ಬಣ್ಣಿಸಿದರು. ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದ ಲಕ್ಷ್ಮಣ ಸವದಿಯವರಿಗೆ ಬಿಜೆಪಿ ಮಾತು ತಪ್ಪಿದೆ. ನುಡಿದಂತೆ ನಡೆಯದ ನಾಯಕರನ್ನು ತೊರೆದು ನುಡಿದಂತೆ ನಡೆಯುವ ಪಕ್ಷಕ್ಕೆ ಸವದಿ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ತಮ್ಮ ಜಿಲ್ಲೆ ಮತ್ತು ತಮ್ಮ ಕ್ಷೇತ್ರದ ಬಗ್ಗೆ ಅಪಾರ ಕಾಳಜಿಯಿರುವ ಸವದಿಯವರು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂಬ ಭರವಸೆಯಿಂದ ನಮ್ಮೊಡೆನ ಕೈಜೋಡಿಸಲು ಬಂದಿದ್ದಾರೆ ಎಂದು ನುಡಿದ ಡಿಕೆಶಿ, ಪಕ್ಷಕ್ಕೆ ತುಂಬು ಹೃದಯದಿಂದ ಅವರನ್ನು ಸ್ವಾಗತಿಸುತ್ತಿದ್ದೇನೆ ಎಂದರು
ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣ್ ದೀಪ್ ಸುರ್ಜೇವಾಲಾ ಮಾತನಾಡಿ, ಎಲ್ಲಾ ರಾಜಕೀಯ, ತತ್ವ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಹಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಉತ್ತಮ ಕರ್ನಾಟಕವನ್ನು ರೂಪಿಸುವುದೇ ಇವರೆಲ್ಲರ ಉದ್ದೇಶವಾಗಿದೆ ಎಂದರು.
ಲಕ್ಷ್ಮಣ ಸವದಿ ಮಾತನಾಡಿ, 25 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಬಿಜೆಪಿ ತೊರೆಯುತ್ತಿದ್ದೇನೆ. ಸುಮಾರು 30 ಸಾವಿರ ಮಂದಿ ಕಾರ್ಯಕರ್ತರು, ಹಿತೈಷಿಗಳು ನಿಮಗೆ ಭವಿಷ್ಯವಿದ್ದರೆ ಅದು ಬಿಜೆಪಿಯಲ್ಲಿ ಎಂದು ಹೇಳಿದ್ದಾರೆ. ನಾನು ಬೇರೆ ಪಕ್ಷದಲ್ಲಿದ್ದರೂ, ವಿಚಾರಧಾರೆ ಬೇರೆಯಾಗಿದ್ದರೂ ಕಾಂಗ್ರೆಸ್ ನಾಯಕರು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಬಿಜೆಪಿಯಲ್ಲಿ ಕೇಳದೇ ಕೊಟ್ಟ ಡಿಸಿಎಂ ಸ್ಥಾನದಿಂದ ಹೇಳದೇ ಇಳಿಸಿದರು. ನನಗೆ ಹೊಂದಾಣಿಕೆ ರಾಜಕೀಯ ಗೊತ್ತಿಲ್ಲ. ಸವದಿ ಇದ್ದ ಕಡೆ ನಿಷ್ಠೆ ಇರುತ್ತದೆ ಎಂದು ನುಡಿದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸೇರ್ಪಡೆಯಾದ ಶಶಿಕಾಂತ್ ನಾಯಕ್ ಮತ್ತು ಶಂಕರ್ ಗೌಡರನ್ನೂ ಸಹ ಸ್ವಾಗತಿಸಲಾಯಿತು.