ಬೆಂಗಳೂರು: ಲಂಚ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಚನ್ನಗಿರಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಷರತ್ತು ಬದ್ದ ಜಾಮೀನು ನೀಡಿದೆ. ಶನಿವಾರ ರಾತ್ರಿಯೇ ಮಾಡಾಳ್ ಜೈಲಿನಿಂದ ಹೊರಬಂದಿದ್ದಾರೆ.
ಜೈಲಿನಿಂದ ಹೊರಬಂದ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಮಾಡಾಳ್, ಈ ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನನಗೆ ವಿಶ್ವಾಸವಿದೆ. ನಾನು ಈ ಆರೋಪದಿಂದ ಶೀಘ್ರದಲ್ಲೇ ಮುಕ್ತನಾಗಲಿದ್ದೇನೆ. ಯಾವುದೇ ಟಿ.ವಿ ಮತ್ತಿತರ ಮಾಧ್ಯಮಗಳಿಲ್ಲದ ನಾಲ್ಕು ಗೋಡೆಯ ನಡುವೆ ಇಷ್ಟು ದಿನ ಇದ್ದ ಕಾರಣ ಹೊರಗೆ ಏನು ನಡೆಯುತ್ತಿದೆ ಎಂಬ ಅರಿವೂ ಸಹ ನನಗೆ ಇರಲಿಲ್ಲ. ಸಧ್ಯಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗೆಗಳನ್ನು ನೋಡಿ ಬಳಿಕ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧರಿಸುವುದಾಗಿ ಹೇಳಿದ್ದಾರೆ.
ಚನ್ನಗಿರಿಯಲ್ಲಿ ಭಾನುವಾರ ತಮ್ಮ ಬೆಂಬಲಿಗರ ಸಭೆ ಏರ್ಪಡಿಸಿರುವ ಮಾಡಾಳ್ ವಿರೂಪಾಕ್ಷಪ್ಪ, ತಮ್ಮ ರಾಜಕೀಯ ನಡೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಚೆನ್ನಗಿರಿಯ ಬಿಜೆಪಿ ಟಿಕೆಟ್ ಶಿವಕುಮಾರ್ ಅವರಿಗೆ ಘೋಷಿಸಲಾಗಿದ್ದು, ಪಕ್ಷೇತರವಾಗಿ ಸ್ಪರ್ಧಿಸುವ ಬಗ್ಗೆಯೂ ಮಾಡಾಳ್ ಚಿಂತನೆ ನಡೆಸಿದ್ದಾರೆನ್ನಲಾಗಿದೆ.