ಮದ್ದೂರು ತಾಲ್ಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿರುವ ಮದ್ದೂರಮ್ಮ ಕೆರೆಯ ಹಿನ್ನೀರಿನಲ್ಲಿ ಮುಳುಗಿ ಮಹಿಳೆ, ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿರುವ ದಾರುಣ ಘಟನೆ ಜರುಗಿದೆ.
ವಳಗೆರೆಹಳ್ಳಿಯ ಮುತ್ತುರಾಜ್ ಪತ್ನಿ ಶೈಲಜಾ (40), ಮಗ ತೇಜಸ್ (10) ಹಾಗೂ ಪಕ್ಕದ ಮನೆಯ ಶ್ರೀನಿವಾಸ್ ಅವರ ಮಗ ಯೋಗೇಶ್ ಗೌಡ (15) ಮೃತಪಟ್ಟ ದುರ್ದೈವಿಗಳು. ಶೈಲಜಾ ಮದ್ದೂರಮ್ಮ ಕೆರೆಗೆ ನಿತ್ಯ ಹಸು ಮೇಯಿಸಲು ಹೋಗುತ್ತಿದ್ದು, ನೆನ್ನೆ ತನ್ನ ಮಗ ತೇಜಸ್ ಹಾಗೂ ಯೋಗೇಶ್ ಗೌಡ ಅವರನ್ನು ಜೊತೆಗೆ ಕರೆದೊಯ್ದಿದ್ದಾರೆ.
ಸಂಜೆ ವಾಪಸ್ಸಾಗುವ ವೇಳೆ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದು, ಮಕ್ಕಳನ್ನು ರಕ್ಷಣೆ ಮಾಡಲು ಹೋದಾಗ ಶೈಲಜಾ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
