ಲಕ್ನೋ: ಕಳ್ಳತನದ ಶಂಕೆಯಲ್ಲಿ ಕಂಪೆನಿಯೊಂದರ ಮ್ಯಾನೇಜರ್ ಒಬ್ಬರನ್ನು ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಶಿವಂ ಜೋಹ್ರಿ ಎಂದು ಗುರುತಿಸಲಾಗಿದ್ದು, ಜೋಹ್ರಿ ಮೃತದೇಹವನ್ನು ದುಷ್ಕರ್ಮಿಗಳು ಸರಕಾರಿ ಆಸ್ಪತ್ರೆಯ ಹೊರಗಡೆ ಎಸೆದಿದ್ದರು ಎನ್ನಲಾಗಿದೆ.
ಟ್ರಾನ್ಸ್ ಪೋರ್ಟ್ ಕಂಪೆನಿಯೊಂದರಲ್ಲಿ ಶಿವಂ ಜೋಹ್ರಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇವರನ್ನು ಕಂಬಕ್ಕೆ ಕಟ್ಟಿ ಹಾಕಿ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿವಂ ಕಳೆದ ಏಳು ವರ್ಷಗಳಿಂದ ಸಾರಿಗೆ ಉದ್ಯಮಿ ಬಂಕಿಮ್ ಸೂರಿ ಎಂಬಾತನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಉದ್ಯಮಿಯೊಬ್ಬರಿಗೆ ಸಂಬಂಧಿಸಿದ ಪ್ರಮುಖ ಪ್ಯಾಕೇಜ್ ಒಂದು ಕಾಣೆಯಾಗಿತ್ತು. ಆನಂತರ ಹಲವಾರು ನೌಕರರ ಮೇಲೆ ಹಲ್ಲೆ ನಡೆಸಲಾಗಿತ್ತು ಎನ್ನುವುದು ತಿಳಿದುಬಂದಿದೆ.
ಮಂಗಳವಾರ ರಾತ್ರಿ ಶಿವಂ ಅವರ ಮೃತದೇಹವನ್ನು ವೈದ್ಯಕೀಯ ಕಾಲೇಜಿನಲ್ಲಿ ಬಿಟ್ಟು ಹೋಗಲಾಗಿತ್ತು. ವಿದ್ಯುತ್ ಶಾಕ್ನಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದರು. ಆದರೆ ಪೊಲೀಸ್ ಅಧಿಕಾರಿಯೊಬ್ಬರು ಆಸ್ಪತ್ರೆಯಲ್ಲಿ ದೇಹವನ್ನು ಪರೀಕ್ಷಿಸಿದಾಗ, ದೇಹದಲ್ಲಿದ್ದ ಗಾಯಗಳು ವಿದ್ಯುದಾಘಾತದ ಗಾಯಗಳ ರೀತಿ ಇಲ್ಲ ಎನ್ನುವುದನ್ನು ಮನಗಂಡರು. ಆನಂತರ ಮತ್ತೊಂದು ಆಯಾಮದಲ್ಲಿ ತನಿಖೆ ಆರಂಭವಾಗಿತ್ತು.